ಹರಿಹರ: ತಾಲೂಕಿನಲ್ಲಿ ಹಕ್ಕಿಜ್ವರದ ಉಗಮ ಸ್ಥಾನವಾದ ಬನ್ನಿಕೋಡು ಗ್ರಾಮಕ್ಕೆ ಶನಿವಾರ ರೋಗ ನಿಯಂತ್ರಣಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಅಭಿಷೇಕ ಪೌಲ್ಟ್ರಿ ಫಾರಂ ಸೇರಿದಂತೆ ವಿವಿಧ ಕೋಳಿ ಫಾರಂಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ ಅಧಿಕಾರಿಗಳು ನಂತರ ಗ್ರಾಮದ ಬೀರೇಶ್ವರ ದೇವಸ್ಥಾನ ಅವರಣದಲ್ಲಿ ಜಾಗೃತಿ ಸಭೆ ನಡೆಸಿದರು.
ಶಾಸಕ ಎಸ್.ರಾಮಪ್ಪ ಮಾತನಾಡಿ, ಕೊರೊನಾ ವೈರಸ್ ನಿಂದ ವಿಶ್ವವೇ ತಲ್ಲಣಗೊಂಡಿದೆ. ಆದರೆ ಕೊರೊನಾ ವೈರಸ್ ಗೂ ಈ ಹಕ್ಕಿ ಜ್ವರಕ್ಕೂ ಯಾವುದೇ ಸಂಬಧವಿಲ್ಲ, ಯಾರು ಭಯ ಪಡುವುದು ಬೇಡ ಎಂದು ಆತಂಕಗೊಂಡಿರುವ ಜನರಲ್ಲಿ ಧೈರ್ಯ ತುಂಬಿದರು.
ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಕಳೆದ ಮೂರ್‍ನಾಲ್ಕು ದಿನಗಳಿಂದ ಹಗಲಿರಳು ಎನ್ನದೆ ಶ್ರಮವಹಿಸಿ ಹಕ್ಕಿ ಜ್ವರ ಉಲ್ಬಣಗೊಳ್ಳದಂತೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಪರಿಣಾಮಕಾರಿಯಾದ ಕಾರ್ಯನಿರ್ವಹಿಸಿದ್ದಾರೆ. ಗ್ರಾಮಸ್ಥರು ಕೇವಲ ವದಂತಿಗಳಿಗೆ ಕಿವಿಕೊಡಬಾರದು ಎಂದರು.
ಕಾಯಿಸುವ, ಬೇಯಿಸುವ, ಕುದಿಸುವ ನಮ್ಮ ದೇಶಿಯ ಅಹಾರ ಪದ್ಧತಿಯಿಂದ ಯಾವುದೇ ಹಕ್ಕಿಜ್ವರದಂತ ವೈರಾಣು ಸೋಂಕು ಸುಲಭವಾಗಿ ಹರಡುವುದಿಲ್ಲ. ಉಷ್ಣಕ್ಕೆ ಬಹುತೇಕ ವೈರಸ್‌ಗಳು ತಮ್ಮ ಆಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹಾಗೆಂದು ನಿರ್ಲಕ್ಷ್ಯ ಮಾಡುವಂತಿಲ್ಲ ಎಂದ ಅವರು, ಸರ್ಕಾರ ಮತ್ತು ಅಧಿಕಾರಿಗಳು ಕೊಟ್ಟ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಅವರಿಗೆ ಸಹಕರಿಸಬೇಕು ಎಂದು ಗ್ರಾಮಸ್ಥರಿಗೆ ಕಿವಿ ಮಾತು ಹೇಳಿದರು.
ರೋಗ್ರ ನಿಯಂತ್ರಣಾಧಿಕಾರಿಯಾದ ಡಾ.ಎಚ್.ಎಸ್.ಜಯಣ್ಣ ಮಾತನಾಡಿ, ಗ್ರಾಮದಲ್ಲಿ ಹಕ್ಕಿಜ್ವರ ದೃಢ ಪಟ್ಟ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿಗಳ ಅದೇಶದ ಮೆರೆಗೆ ನಮ್ಮ ಅಧಿಕಾರಿಗಳ ತಂಡ ಗ್ರಾಮದಲ್ಲಿರುವ ನಾಟಿ ಕೋಳಿಗಳನ್ನು ಹಿಡಿದು ವೈಜ್ಞಾನಿಕ ರೀತಿಯಲ್ಲಿ ನಾಶಪಡಿಸಲಾಗಿದ್ದು ಯಾರು ಭಯಪಡುವ ಅಗತ್ಯವಿಲ್ಲ ಎಂದರು.
ಈಗಾಗಲೇ ಗ್ರಾಮದಲ್ಲಿ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದ್ದು ಸೋಂಕು ಹರಡದಂತೆ ಫಾಗಿಂಗ್ ಮತ್ತು ಕ್ರಿಮಿನಾಶಕ ಸಿಂಪಡಿಸಲಾಗಿದ್ದು, ಯಾರು ಹೆದರುವ ಅವಶ್ಯಕತೆಯಿಲ್ಲ ಎಂದು ಹೇಳುವ ಮೂಲಕ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.