Advertisement

ಚಿರತೆ ಸೆರೆಗೆ ಮುಂದುವರೆದ ಕಾರ್ಯಾಚರಣೆ

03:24 PM Jul 03, 2019 | Naveen |

ಹರಿಹರ: ತಾಲೂಕಿನ ಹೊಳೆಸಿರಿಗೆರೆ ಗ್ರಾಮದಲ್ಲಿ ಭಾನುವಾರ ಮೂವರನ್ನು ಗಾಯಗೊಳಿಸಿ ಪರಾರಿಯಾಗಿದ್ದ ಚಿರತೆ ಸೋಮವಾರ ರಾತ್ರಿಯಾದರೂ ಪತ್ತೆಯಾಗಿಲ್ಲ.

Advertisement

ಸೋಮವಾರ ರಾತ್ರಿವರೆಗೂ ಹೊಳೆಸಿರಿಗೆರೆ ಗ್ರಾಮದ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಮಂಗಳವಾರ ಸಮೀಪದ ಧೂಳೆಹೊಳೆ ಗ್ರಾಮದ ಆಸುಪಾಸಿನಲ್ಲಿ ಹುಡುಕಾಟ ನಡೆಸಿದ್ದು, ರಾತ್ರಿಯಾದರೂ ಚಿರತೆ ಕಾಣಿಸಿಲ್ಲ.

ಮಂಗಳವಾರ ಬೆಳಗ್ಗೆ ಚಿರತೆಯ ಹೆಜ್ಜೆ ಜಾಡು ಪರಿಶೀಲಿಸಿದಾಗ ಧೂಳೆಹೊಳೆ ಗ್ರಾಮದ ಕಡೆಗೆ ಚಿರತೆ ಸಾಗಿರುವುದು ತಿಳಿಯಿತು. ಅಲ್ಲಲ್ಲಿ ಹೆಜ್ಜೆ ಗುರುತುಗಳು ಅಸ್ಪಷ್ಟವಾಗಿ, ಕಾಣದಾಗಿದ್ದು, ಮತ್ತೆಲ್ಲೋ ಕಾಣುವುದು ಅಧಿಕಾರಿ-ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಡ್ರೋಣ್‌ನಿಂದ ಹುಡುಕಾಟ: ಚಿರತೆ ಹುಡುಕಾಟಕ್ಕೆ ಡ್ರೋಣ್‌ ಕ್ಯಾಮೆರಾ ಬಳಸಲಾಗುತ್ತಿದೆ. ಗಿಡ-ಮರಗಳಿರುವ, ತಗ್ಗು-ದಿನ್ನೆ ಪ್ರದೇಶಗಳಲ್ಲೆಲ್ಲಾ ಡ್ರೋಣ್‌ ಕ್ಯಾಮೆರಾ ಹಾರಾಡಿಸಿ ಅಧಿಕಾರಿಗಳು ಚಿರತೆ ಹುಡುಕುತ್ತಿದ್ದಾರೆ. ಸಂಶಯಾಸ್ಪದ ಸ್ಥಳಗಳಲ್ಲಿ ಗಿಡ-ಮರಗಳಿಗೆ ಕ್ಯಾಮೆರಾಗಳನ್ನು ಕಟ್ಟಿ ಚಿತ್ರೀಕರಿಸುವ ಮೂಲಕವೂ ಚಿರತೆ ಚಲನವಲನ ಕಂಡು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಇದಲ್ಲದೆ ಫ್ಲ್ಯಾಶ್‌ ರಹಿತ ಕ್ಯಾಮೆರಾಗಳನ್ನೂ ಸಹ ಕಾರ್ಯಾಚರಣೆಗೆ ಬಳಸಲಾಗಿದೆ.

ಬೋನು ಅಳವಡಿಕೆ: ಧೂಳೆಹೊಳೆ ಗ್ರಾಮದ ಹೊರವಲಯದಲ್ಲಿ ಜಾಲಿ ಗಿಡದ ಪೊದೆಯ ಬಳಿ ಬೋನು ಅಳವಡಿಸಿದ್ದು, ಹಸಿದ ಚಿರತೆ ಬಂದು ಬಲೆಗೆ ಬೀಳಲೆಂದು ಅದರೊಳಗೆ ಕುರಿಯನ್ನು ಹೋಲುವ ಆಕೃತಿಯನ್ನು ಇರಿಸಲಾಗಿದೆ.

Advertisement

ಪ್ರೌಢಶಾಲೆಗೆ ರಜೆ: ಗ್ರಾಮಕ್ಕೆ ಚಿರತೆ ಬಂದಿದೆಯೆಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಿಂಡು ಹಿಂಡಾಗಿ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದರು. ಜನರು ಗುಂಪುಗೂಡದಂತೆ, ಅಲ್ಲಿಂದ ದೂರಕ್ಕೆ ಕಳುಹಿಸಲು ಅಧಿಕಾರಿಗಳು ಹರಸಾಹಸ ಪಡಬೇಕಾಯಿತು. ಗ್ರಾಮದಿಂದ 1 ಕಿ.ಮೀ. ದೂರದ ಹೊಳೆ ದಂಡೆ ಮೇಲಿರುವ ಪ್ರೌಢಶಾಲೆಗೆ ರಜೆ ಘೋಷಿಸಲಾಗಿತ್ತು.

ವಲಯ ಅರಣ್ಯಾಧಿಕಾರಿಗಳಾದ ಉಷಾರಾಣಿ ಎಚ್., ಹರ್ಷ, ಇದಾಯತ್‌, ಚಂದ್ರಕಾಂತ್‌ ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಚಿರತೆ ಹುಡುಕಾಟ ನಡೆಸಿದ್ದಾರೆ. ಗ್ರಾಮದ ಸುತ್ತಮುತ್ತ ರಾತ್ರಿ ವೇಳೆಯೂ ಗಸ್ತು ತಿರುಗುತ್ತಿದ್ದಾರೆ. ಒಟ್ಟಿನಲ್ಲಿ ಚಿರತೆ ಹಿಡಿಯಲು ಅರಣ್ಯಾಧಿಕಾರಿಗಳು ಶತಪ್ರಯತ್ನ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next