ಹರಿಹರ: ಸೂಕ್ತ ರೀತಿಯಲ್ಲಿ ಕಸ ವಿಲೆವಾರಿ ಮಾಡುವುದು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಅತಿ ಮುಖ್ಯ ಎಂದು ಗ್ರಾಪಂ ಅಧ್ಯಕ್ಷ ಪ್ರಮೋದ್ ಬಣಕಾರ್ ಹೇಳಿದರು.
ತಾಲೂಕಿನ ಹನಗವಾಡಿ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ಗುರುವಾರ ಹಮ್ಮಿಕೊಂಡಿದ್ದ ಕಸದ ಡಬ್ಬಿಗಳ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ನಂತಹ ಕಸದ ಉತ್ಪಾದನೆ ಮಿತಿ ಮೀರುತ್ತಿದ್ದು, ಸರಿಯಾಗಿ ವಿಲೇವಾರಿ ಮಾಡಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯ ಎಂದರು.
ಕೇಂದ್ರ, ರಾಜ್ಯ ಸರ್ಕಾರಗಳು ಕಸದ ಸಂಸ್ಕರಣೆ ಮತ್ತು ವಿಲೇವಾರಿ ಆದ್ಯತೆ ನೀಡಿ, ಗ್ರಾಪಂಗಳಿಗೆ ಲಕ್ಷಾಂತರ ರೂ. ಅನುದಾನವನ್ನು ನೀಡುತ್ತಿರುವುದು ಶ್ಲಾಘನೀಯ. ಕಸ ವಿಲೆಗೆಂದು ಸರ್ಕಾರಗಳು ನೀಡುವ ಅನುದಾನದೊಂದಿಗೆ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ಗ್ರಾಮದಲ್ಲಿ ಅತ್ಯುತ್ತಮ ಕಸ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಕಸ ವಿಲೇವಾರಿ ಘಟಕದಲ್ಲಿ ಕಸದಿಂದ ಗೊಬ್ಬರ ತಯಾರಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಲು ಯೋಜಿಸಲಾಗಿದೆ. ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದಕ್ಕೆ ಧರ್ಮಸ್ಥಳ ಸಂಸ್ಥೆ ಪ್ರತಿ ದೇವಸ್ಥಾನಕ್ಕೆ ಎರಡು ಕಸದ ಡಬ್ಬಿಗಳನ್ನು ವಿತರಿಸುತ್ತಿರುವುದು ಮಾದರಿಯಾಗಿದೆ ಎಂದರು.
ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಬಿ.ರಾಘವೇಂದ್ರ, ಮುಖಂಡರಾದ ರುದ್ರಪ್ಪಯ್ಯ, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆ.ಪಾಲಾಕ್ಷಪ್ಪ, ಕೆ.ವಿ.ರುದ್ರಮುನಿ, ಶಿವಕುಮಾರ್, ಮಹೇಶ್ ಬಿ.,
ಚೇತನ್, ವಲಯ ಮೇಲ್ವಿಚಾರಕಿ ಮಂಜುಳಾ ಮತ್ತಿತರರಿದ್ದರು.