ಹರಿಹರ: ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿರುವ ಇಲ್ಲಿನ 29ನೇ ವಾರ್ಡ್ ಅಭ್ಯರ್ಥಿ ಎಸ್.ಎಂ. ವಸಂತ್ ಅವರ ನಾಮಪತ್ರವನ್ನು ಚುನಾವಣಾಧಿಕಾರಿಗಳು ಅಂಗೀಕರಿಸಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಬಿಜೆಪಿ ಮುಖಂಡ ಶೇರಾಪುರದ ಅಜ್ಜಪ್ಪ ಆರೋಪಿಸಿದರು.
ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅಭ್ಯರ್ಥಿ ಎಸ್.ಎಂ. ವಸಂತ್‌ರ ತಂದೆಯ ಹೆಸರಿನಲ್ಲಿರುವ 5.6 ಎಕರೆ ಜಮೀನೊಂದು, ಎಕರೆಗೆ 30-35 ಲಕ್ಷ ರೂ. ಬೆಲೆ ಬಾಳುತ್ತದೆ. ಆದರೆ ಅಫಿಡವಿಟ್‌ನಲ್ಲಿ 5 ಎಕರೆ 2 ಗುಂಟೆ ಎಂದು ತೋರಿಸಿದ್ದಲ್ಲದೇ ಒಟ್ಟು ಬೆಲೆ 10 ಲಕ್ಷ ರೂ. ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂಬ ನಮ್ಮ ತಕರಾರಿಗೆ ಮನ್ನಣೆ ನೀಡಿಲ್ಲ ಎಂದರು.
ಆ ಜಮೀನು ರಾಷ್ಟ್ರೀಯ ಹೆದ್ದಾರಿ ಸಮೀಪವಿದ್ದು, ಒಂದು ಎಕರೆಯ ಎಸ್‌ಆರ್ ಬೆಲೆಯೇ 30 ಲಕ್ಷ ರೂ. ದಾಟುತ್ತದೆ. ಮಾಹಿತಿ ಮುಚ್ಚಿಟ್ಟಿರುವ ಅಂಶವನ್ನು ಆ ವಾರ್ಡಿನ ಬಿಜೆಪಿ ಅಭ್ಯರ್ಥಿ ಮೋಹನ್ ಎಚ್., ದಾಖಲೆ ಸಮೇತ ಚುನಾವಣಾಧಿಕಾರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಆದರೆ ಅವರು ನಾಮಪತ್ರ ತಿರಸ್ಕರಿಸುವ ಬದಲು ಸ್ವೀಕಾರ ಮಾಡಿ ಈ ಕುರಿತು ಸಕ್ಷಮ ಪ್ರಾಧಿಕಾರದಲ್ಲಿ ಮೇ 20ರ ನಂತರ ದೂರು ಸಲ್ಲಿಸಿ ಎಂದಿದ್ದಾರೆ. ಪ್ರಭಾವಿ ರಾಜಕಾರಣಿಯ ಅಣ್ಣನ ಪುತ್ರರಾಗಿರುವ ಕಾಂಗ್ರೆಸ್ ಅಭ್ಯರ್ಥಿ ತಮ್ಮ ಪ್ರಭಾವ ಬಳಸಿದ್ದಾರೆಂಬ ಸಂಶಯವಿದೆ ಎಂದು ದೂರಿದರು.
ಏನು ಕೇಳಿದರೂ ಮೇಲಿನ ಅಧಿಕಾರಿಗಳಿಗೆ ´ೋನ್ ಮಾಡಿ ಮಾಹಿತಿ ಕೇಳುವ ಈ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸ್ವೀಕಾರ, ತಿರಸ್ಕಾರದ ಬಗ್ಗೆ ಸೂಕ್ತ ತರಬೇತಿ ನೀಡಿಲ್ಲವೆ ಎಂದು ಪ್ರಶ್ನಿಸಿದ ಅವರು, ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಿಗೆ ಚುನಾವಣಾ ನೀತಿ, ನಿಯಮದ ಕೈಪಿಡಿಯನ್ನೂ ವಿತರಿಸಿಲ್ಲ ಎಂದು ದೂರಿದರು. ಬಿಜೆಪಿ ಅಭ್ಯರ್ಥಿ ಮೋಹನ್ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿಗೆ ಹಣಬಲ ಇರುವುದರಿಂದ ನಮ್ಮ ಪ್ರಚಾರಕ್ಕೆ ತೊಂದರೆಯೊಡ್ಡಬಹುದು. ಈಗಾಗಲೇ ಗಂಗಾನಗರದಲ್ಲಿ ಪೊಲೀಸ್ ನಿಯೋಜಿಸಲಾಗಿದೆ. ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಪಿ.ಎನ್.ಕುಮಾರ್, ಸಂತೋಷ್, ಬೇತೂರು ಕುಮಾರ, ಮಲ್ಲೇಶ್, ರಾಜನಹಳ್ಳಿ ಬಸವರಾಜ್ ಇತರರಿದ್ದರು.