Advertisement
ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿ ಹಿನ್ನೆಲೆಯಲ್ಲಿ ತಾಪಂ ಸಭಾಂಗಣದಲ್ಲಿ ಮಂಗಳವಾರ ಉಪಾಧ್ಯಕ್ಷೆ ಜಯ್ಯಮ್ಮ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಾಜರಿದ್ದ ಎಲ್ಲಾ 7 ಸದಸ್ಯರೂ ಗೊತ್ತುವಳಿ ಪರವಾಗಿ ಕೈ ಎತ್ತಿದರಾದರೂ ಅಗತ್ಯವಾದ ಮೂರನೆ ಎರಡರಷ್ಟು, ಅಂದರೆ ಕನಿಷ್ಟ 10 ಸದಸ್ಯರ ಬೆಂಬಲವಿಲ್ಲದ್ದರಿಂದ ಗೊತ್ತುವಳಿಗೆ ಸೋಲುಂಟಾಗಿದೆ ಎಂದು ಇಒ ಗಂಗಾಧರನ್ ಘೋಷಿಸಿದರು.
Related Articles
Advertisement
ಸತ್ಯಕ್ಕೆ ಸಿಕ್ಕ ಜಯ: ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜಪ್ಪ, ಅವಿಶ್ವಾಸ ಗೊತ್ತುವಳಿಗೆ ಸಹಿ ಮಾಡಿದ್ದವರೇ ಗೈರು ಹಾಜರಾಗಿರುವುದು ಅವಿಶ್ವಾಸ ನಿರ್ಣಯಕ್ಕೆ ಸೋಲಾಗಲು ಕಾರಣ. ಕೆಲ ಸದಸ್ಯರು ನನ್ನ ವಿರುದ್ಧ ಅವಿಶ್ವಾಸಕ್ಕೆ ಮುಂದಾಗಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಎಲ್ಲಾ ಸದಸ್ಯರ ಕ್ಷೇತ್ರಗಳಿಗೂ ಸಮಾನ ಆದ್ಯತೆ, ಅನುದಾನ ನೀಡುತ್ತಾ ಅಭಿವೃದ್ಧಿ ಪರವಾಗಿ ಕಾರ್ಯ ನಿರ್ವಹಿಸುತ್ತಿರುವ ನನ್ನ ವಿರುದ್ಧದ ನಿರ್ಣಯಕ್ಕೆ ಸೋಲಾಗುವ ಮೂಲಕ ಸತ್ಯಕ್ಕೆ ಜಯ ಸಿಕ್ಕಂತಾಗಿದೆ ಎಂದರು.
ವೀರಭದ್ರಪ್ಪಗೆ ನಿರಾಶೆ: ತಾಪಂ ಅಧ್ಯಕ್ಷ ಸ್ಥಾನ ಎಸ್ಸಿ ವರ್ಗಕ್ಕೆ ಮೀಸಲಾಗಿದ್ದು, ಜೆಡಿಎಸ್, ಬಿಜೆಪಿ ಮೈತ್ರಿಯಲ್ಲಿ ಏಕೈಕ ಅರ್ಹ ಅಭ್ಯರ್ಥಿ ಶ್ರೀದೇವಿ ಅವರನ್ನು ಅಧ್ಯಕ್ಷರನ್ನಾಗಿಸಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಹೊಸ ಮೈತ್ರಿಗೆ ಮುಂದಾಗಿದ್ದು, ಅದೆ ಮೀಸಲು ವರ್ಗಕ್ಕೆ ಸೇರಿದ್ದ ಏಕೈಕ ಅಭ್ಯರ್ಥಿಯಾಗಿ ಅಧ್ಯಕ್ಷರಾಗಲು ತುದಿಗಾಲಲ್ಲಿ ನಿಂತಿದ್ದ ಕಾಂಗ್ರೆಸ್‌ನ ವೀರಭದ್ರಪ್ಪಗೆ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿರುವುದು ನಿರಾಸೆ ಮೂಡಿಸಿದೆ.
ಐವರು ಸದಸ್ಯ ಬಲದ ಬಿಜೆಪಿಗೆ ಗದ್ದುಗೆತಾಪಂನಲ್ಲಿ ಜೆಡಿಎಸ್‌ನ 6, ಬಿಜೆಪಿಯ 5 ಹಾಗೂ ಕಾಂಗ್ರೆಸ್‌ನ 4 ಸದಸ್ಯರು ಸೇರಿ ಒಟ್ಟು 15 ಸದಸ್ಯರಿದ್ದಾರೆ. ತಾಪಂ ಅಧಿಕಾರ ಹಿಡಿಯಲು ಕನಿಷ್ಟ 8 ಸದಸ್ಯ ಬಲ ಅತ್ಯಗತ್ಯ. ಮುಂಚೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಸರಾಗವಾಗಿ ಅಧಿಕಾರ ದಕ್ಕಿತ್ತು. ಆದರೆ ಈಗ ಜೆಡಿಎಸ್ ಕಾಂಗ್ರೆಸ್ ಜೊತೆ ಸೇರಿಕೊಂಡಿದ್ದು, ಬಿಜೆಪಿಗೆ ಅಧಿಕಾರ ತೊರೆಯುವುದು ಅನಿವಾರ್ಯವಾಗಿತ್ತು. ಕೊನೆ ಗಳಿಗೆಯಲ್ಲಿ ಇಬ್ಬರು ಸದಸ್ಯರು ಸಭೆಗೆ ಗೈರಾಗಿದ್ದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸದಸ್ಯರಿಗೆ ವಿಪ್ ಜಾರಿಗೊಳಿಸಿರಲಿಲ್ಲ ಎನ್ನಲಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡಿಸಲು ತಾಪಂನ ಚುನಾಯಿತ ಒಟ್ಟು ಸದಸ್ಯರ ಅರ್ಧದಷ್ಟು ಅಂದರೆ ಕನಿಷ್ಟ 8 ಸದಸ್ಯರು ಮನವಿ ಮಾಡಬಹುದಾದರೂ ನಿರ್ಣಯದ ಗೆಲುವಿಗೆ ಒಟ್ಟು ಸದಸ್ಯರ ಮೂರನೆ ಎರಡರಷ್ಟು ಅಂದರೆ 10 ಸದಸ್ಯರ ಬೆಂಬಲ ಕಡ್ಡಾಯವಾಗಿರುವುದು ಬಿಜೆಪಿ ವರವಾಗಿ ಪರಿಣಮಿಸಿದೆ.