Advertisement

ವರ್ಷದಿಂದ ಬಂದೇ ಇಲ್ಲ ಆವಾಸ್‌ ಯೋಜನೆ ಸಹಾಯಧನ

05:35 PM Jun 15, 2020 | Naveen |

ಹರಿಹರ: ನಗರ ಪ್ರದೇಶದ ಬಡವರಿಗೆ ಸೂರು ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಲ್ಲಿ ಕಳೆದೊಂದು ವರ್ಷದಿಂದ ಸರಿಯಾಗಿ ಸಹಾಯಧನ ಬಿಡುಗಡೆ ಆಗದ ಕಾರಣ, ಮನೆಗಳ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಫಲಾನುಭವಿಗಳು ಪರದಾಡಬೇಕಾಗಿದೆ.

Advertisement

ಆವಾಸ್‌ ಯೋಜನೆಯಡಿ ಸರ್ಕಾರ ಮನೆ ನಿರ್ಮಾಣದ ವಿವಿಧ ಹಂತಗಳಲ್ಲಿ ತಲಾ 37,000 ರೂಗಳಂತೆ 4 ಕಂತುಗಳಲ್ಲಿ ಒಟ್ಟು 1.5 ಲಕ್ಷ ರೂ. ಸಹಾಯಧನ ನೀಡುತ್ತದೆ. ಆದರೆ ನಗರದಲ್ಲಿ ಕಳೆದ ಸುಮಾರು 1 ವರ್ಷದಿಂದ ಅನುದಾನ ಬಿಡಗಡೆಯಾಗಿಲ್ಲ, ಕಾಮಗಾರಿಗಳು ಅರ್ಧಕ್ಕೆ ನಿಂತಿದ್ದು, ಬಿಸಿಲು, ಮಳೆ-ಗಾಳಿಗೆ ಅರ್ಧ ಕಟ್ಟಿದ ಮನೆ ಕರಗಿ ಹೋಗುತ್ತಿವೆ ಎಂದು ಫಲಾನುಭವಿಗಳು ಗೋಳಿಡುತ್ತಿದ್ದಾರೆ. 2019ರಲ್ಲಿ ನಗರಸಭಾ ವ್ಯಾಪ್ತಿಯ ಒಟ್ಟು 232 ಫಲಾನುಭವಿಗಳು ಪಿಎಂ ಆವಾಸ್‌ ಯೋಜನೆಗೆ ಆಯ್ಕೆಯಾಗಿದ್ದು, ಇವರಲ್ಲಿ 23 ಜನರು ಅಡಿಪಾಯ ಹಾಕಿ, ಉಳಿದವರು ಗೋಡೆ ಹಂತದಲ್ಲಿ ಮನೆ ನಿರ್ಮಿಸಿಕೊಂಡು ಉಳಿದ ಕಾಮಗಾರಿಗೆ ಸರ್ಕಾರದ ಸಹಾಯಧನಕ್ಕೆ ಚಾತಕ ಪಕ್ಷಗಳಂತೆ ಕಾಯುತ್ತಿದ್ದಾರೆ.

ಈಗಾಗಲೇ ಇದ್ದ ಹಳೆ ಮನೆ ಕೆಡವಿಕೊಂಡು, ಕೈಲಿದ್ದ ಹಣವನ್ನೂ ಖಾಲಿ ಮಾಡಿಕೊಂಡು ಬಯಲು ಪಾಲಾಗಿರುವ ಫಲಾನುಭವಿಗಳು ಕಳೆದ 9-10 ತಿಂಗಳಿನಿಂದ ನಿತ್ಯ ನಗರಸಭೆಗೆ ಅಲೆದಾಡುತ್ತಿದ್ದಾರೆ. ಅಷ್ಟರಲ್ಲಿ ಕೋವಿಡ್ ವಕ್ಕರಿಸಿದ್ದು, ಲಾಕ್‌ಡೌನ್‌ ಮುಗಿದ ಕೂಡಲೇ ಅನುದಾನ ಬರಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಈಗ ಲಾಕ್‌ಡೌನ್‌ ಮುಗಿದು ತಿಂಗಳೇ ಉರುಳಿದರೂ ಹಣ ಬಿಡುಗಡೆಯಾಗಿಲ್ಲ. ಮಳೆಗಾಲ ಬೇರೆ ಆರಂಭವಾಗಿದ್ದು, ಇರುವ ಮನೆಯನ್ನೂ ಕೆಡವಿಕೊಂಡಿರುವ ಬಡ ಜನರು ಮಳೆ-ಗಾಳಿ, ಚಳಿಗೆ ಪರಿತಪಿಸಬೇಕಾಗಿದೆ. ಇದ್ದುದರಲ್ಲೆ ಅನುಕೂಲವಿದ್ದವರು ಬಾಡಿಗೆ ಮನೆ ಹಿಡಿದಿದ್ದಾರಾದರೂ ಬಾಡಿಗೆ ಪಾವತಿಗೂ ಈಗ ಹಣವಿಲ್ಲದಾಗಿ ಪರದಾಡುತ್ತಿದ್ದಾರೆ.

ಲಾಕ್‌ಡೌನ್‌ನಿಂದ ವಸತಿ ಇಲಾಖೆಯ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಈಗ ಲಾಕ್‌ಡೌನ್‌ ಮುಗಿದಿದ್ದು, ಸಂಬಂಧ ಪಟ್ಟ ಇಲಾಖೆಗೆ ಪತ್ರ ಬರೆದು ಆದಷ್ಟು ಬೇಗನೆ ಹಣ ಬಿಡುಗಡೆ ಮಾಡಲು ಒತ್ತಾಯಿಸಲಾಗಿದೆ.
ಎಸ್‌.ಲಕ್ಷ್ಮೀ, ಪೌರಾಯುಕ್ತೆ,
ನಗರಸಭೆ. ಹರಿಹರ

Advertisement

Udayavani is now on Telegram. Click here to join our channel and stay updated with the latest news.

Next