Advertisement
ಮೊದಲ ದಿನ ಧ್ರುವ ಪ್ರಸಂಗದಲ್ಲಿ ಕಲಾವಿದ ಉತ್ಥಾನಪಾದ (ಸೇರಾಜೆ ಸೀತಾರಾಮ ಭಟ್), ಧ್ರುವ (ಸಂಕದಗುಂಡಿ ಗಣಪತಿ ಭಟ್), ಸೇರಾಜೆ ಅವರ ನಿಧಾನಗತಿಯ ಪೀಠಿಕೆ ಸೊಗಸಾಗಿತ್ತು. ತಾಯಿ ದೇವರು ಎಂಬುದು ಅಮ್ಮ ಹೇಳಿದ ಪಾಠ. ತಾಯಿ ದೇವರಾದರೆ ದೇವರು ಕೂಡ ತಾಯಿಯೇ ಅಲ್ಲವೇ? ಹಾಗಾದರೆ ತಪಸ್ಸಿಗೆ ಹೋಗುವ ನನಗೆ ಅಲ್ಲಿ ದೇವರೇ ತಾಯಿಯಾಗಿ ಕಾಣಿಸುವನಲ್ಲವೇ ಎಂಬ ಮಾತು ಮನತಟ್ಟಿತು. ನಾ.ಕಾರಂತ ಪೆರಾಜೆಯವರು ಸುನೀತಿಯಾಗಿ, ಮಗನು ತಪಸ್ಸಿಗೆ ಹೋಗುವಾಗ ತೋಡಿಕೊಂಡ ತುಮುಲ ಮನಮುಟ್ಟುವಂತಿತ್ತು.
Related Articles
Advertisement
ಜಟಾಯು-ಶಬರಿ-ಹನುಮಂತ ಪ್ರಸಂಗದಲ್ಲಿ ರಾಮ(ಉಜಿರೆ ಅಶೋಕ ಭಟ್), ಲಕ್ಷ್ಮಣ(ವಾಟೆಪಡು³ ವಿಷ್ಣು ಶರ್ಮ)ನ ಮಾತು ಸೊಗಸಾಗಿತ್ತು. ಅತಿಕಾಯ ಪ್ರಸಂಗದಲ್ಲಿ ಅತಿಕಾಯ (ಉಮಾಕಾಂತ ಭಟ್), ರಾವಣ (ಶಂಭುಶರ್ಮ)ನ ಪಾತ್ರದಲ್ಲಿ ಸೀತಾಪಹಾರಕ್ಕೆ ಶೂರ್ಪನಖೀಯ ಮೇಲೆ ರಾಮ-ಲಕ್ಷ್ಮಣರು ಘಾಸಿ ಮಾಡಿದ್ದೇ ಕಾರಣ ಎಂಬ ರಾವಣನಿಗೆ ಅತಿಕಾಯನ ವಿಮರ್ಶೆಯು ಸೊಗಸಾಗಿತ್ತು. ಸಂಸಾರ ಸಾಗರದಲ್ಲಿ ದುಃಖಗಳನ್ನು ಕಂಡ ನೀವು ವಿರಕ್ತಿ ಭಾವದಿಂದ ಮೋಕ್ಷ ಆಕಾಂಕ್ಷಿಗಳಾಗಿ ನನ್ನೊಡನೆ ಬನ್ನಿ ಎಂದು ಪ್ರಜೆಗಳಿಗೆ ಕರೆ ನೀಡಿದ ಅತಿಕಾಯನ ಮಾತುಗಳು ಮನಮುಟ್ಟಿದವು.
ರಾವಣನು ಜಟಾಯುವಿನಲ್ಲಿ ಹೋರಾಟಕ್ಕೆ ಉಪಾಯವನ್ನು ಆಶ್ರಯಿಸುವಂತಾದದ್ದು ಒಳಗಿನ ಬಲ ಇಲ್ಲವಾದ್ದರಿಂದ ಎಂಬ ರಾಮನ (ಡಾ|ಪ್ರದೀಪ ಸಾಮಗ)ಮಾತು ಖುಷಿ ನೀಡಿತು. ಪ್ರೊ|ಎಂ.ಎಲ್. ಸಾಮಗರು ಲಕ್ಷ್ಮಣನ ಪಾತ್ರ ನಿರ್ವಹಿಸಿದ್ದರು. ಸೀತೆಯನು ರಘುವರನಿಗಿತ್ತು, ಬನ್ನಿರಿ ಸಂಸಾರ ಶರಧಿಯನು ದಾಟಲು ದಿನೇಶ ಅಮ್ಮಣ್ಣಾಯರ ಹಾಡುಗಳನ್ನು ಶ್ರೋತೃಗಳು ಆಸ್ವಾದಿಸಿದರು.
ಕೊನೆಯ ದಿನ ಧರ್ಮರಾಯ-ಭೀಷ್ಮ ಪ್ರಸಂಗದಲ್ಲಿ ಧರ್ಮರಾಯ (ವಾಸುದೇವ ರಂಗ ಭಟ್), ಕೃಷ್ಣ (ನೇವಣಿ ಗಣೇಶ ಭಟ್), ಭೀಷ್ಮ (ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ)ನ ಪಾತ್ರಗಳು ಒಂದಕ್ಕಿಂತ ಒಂದು ಸೊಗಸು ಎಂಬಂತೆ ಮೂಡಿಬಂತು. ಒಬ್ಬ ರಾವಣನ ತಪ್ಪಿನಿಂದ ಕುಲವೇ ನಾಶ, ಒಬ್ಬನಿಂದಾಗಿ ಎಲ್ಲರನ್ನೂ ಕೊಂದು ಕಳೆಯ ಕೂಡದು ಎನ್ನುತ್ತಾ ಭೀಷ್ಮ-ದ್ರೋಣರನ್ನು ಕೊಂದು ಕಳೆದ ಪರಿಗೆ ಧರ್ಮಜ ಪರಿತಪಿಸಿದ ರೀತಿ ಮನಮುಟ್ಟಿತು. ಚಕ್ರವರ್ತಿ ಆನಂದವಾಗಿದ್ದಲ್ಲಿ ರಾಜ್ಯವಿಡೀ ಆನಂದ, ದುಃಖದಲ್ಲಿದ್ದರೆ ರಾಜ್ಯವಿಡೀ ದುಃಖದಲ್ಲಿರುತ್ತದೆ ಎಂಬ ಕೃಷ್ಣನ ಮಾತು, ಕೃಷ್ಣ ಬೋಧಿಸಿದ ಅಮೃತ(ಗೀತೆ)ವನ್ನು ಎಲ್ಲರೂ ಉಣ್ಣುತ್ತಿದ್ದಾರೆ, ಎಲ್ಲ ಬೋಧೆ ಅಲ್ಲಿರುವಾಗ ನಿಮಗೆ ಚಿಂತೆ ಏಕೆ? ಎಂಬ ಭೀಷ್ಮನ ಮಾತು ಅರ್ಥಗರ್ಭಿತ.
ನಮಿಸುತ ನುಡಿದ ಧರ್ಮನಂದನಾ, ಹರಿಯೆ ಸರ್ವೋತ್ತಮ ಜಗದೊಳಗೆ ಪಟ್ಲ ಸತೀಶ ಶೆಟ್ಟರ ಕಂಠಸಿರಿಯ ಹಾಡುಗಳಿಗೆ ಚಪ್ಪಾಳೆಯ ಸುರಿಮಳೆಯಾಯಿತು.
ಎನ್. ರಾಮ ಭಟ್