Advertisement

ಹೆರ್ಗ: ಸ್ವರ್ಣೆ ನದಿಯಲ್ಲಿ ಸತ್ತ ಮೀನುಗಳು ಪತ್ತೆ

06:15 AM Mar 10, 2018 | |

ಉಡುಪಿ: ಹೆರ್ಗ ಸಮೀಪ ಇರುವ ಗೋಪಾಲತೋಟದ ಕಡವಿನ ಬಾಗಿಲು ಪರಿಸರದಲ್ಲಿ ಸ್ವರ್ಣಾ ನದಿಯಲ್ಲಿ ಸುಮಾರು 30-40ರಷ್ಟು ಸತ್ತಮೀನುಗಳು ಮಾ.9ರಂದು ಪತ್ತೆಯಾಗಿವೆ.


ಕೆಲವು ಮೀನುಗಳು ಪೊದೆಯಲ್ಲಿ ಸಿಲುಕಿಕೊಂಡಿರುವುದು.

Advertisement

ಸ್ಥಳೀಯರಾದ ಎಮಿಡಾ ಡಿ’ಸೋಜ, ಬ್ಯಾಪಿಸ್ಟ್‌ ಡಿ’ಅಲ್ಮೆಡಾ, ಡಯಾನ ಡಿ.ಅಲ್ಮೆಡಾ ಮೊದಲಾದವರು ಸಮಾಜಸೇವಕ ಗಣೇಶ್‌ರಾಜ್‌ ಸರಳೇಬೆಟ್ಟು ಅವರಿಗೆ ಈ ಕುರಿತು ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಗಣೇಶ್‌ರಾಜ್‌ ಅವರು ಅಂಬಿಗ ತಿಮ್ಮ ಪೂಜಾರಿ ಮತ್ತು ಸ್ಥಳೀಯರ ಜತೆ ಸೇರಿ ದೋಣಿಯ ಮೂಲಕ ಸಾಗಿ ಪರಿಶೀಲನೆ ನಡೆಸಿದರು. ಆಗ ಸುಮಾರು 40ರಷ್ಟು ಸತ್ತಮೀನುಗಳು ಹಾಗೂ ಒಂದು ಉಡ ಕೂಡ ಪತ್ತೆಯಾಯಿತು. ಕೆಲವು ಮೀನುಗಳು ನದಿ ಪಕ್ಕದ ಪೊದೆಗಳ ಮೇಲೆ ಕೂಡ ಇದ್ದವು. ನೀರಿನ ಮಟ್ಟ ಏರಿಕೆಯಾದ ಸಂದರ್ಭದಲ್ಲಿ ಅವುಗಳು ಪೊದೆಗಳ ಸಣ್ಣ ಕಾಂಡಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಕೆಲವು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಸತ್ತು ಬಿದ್ದಿರುವ ಉಡದ ಎದುರು ಮೀನಿನ ಮುಳ್ಳುಗಳಿವೆ. ಹಾಗಾಗಿ ಉಡ ಕೂಡ ಮೀನುಗಳನ್ನು ತಿಂದ ಅನಂತರ ಸತ್ತಿರಬಹುದು ಎನ್ನುತ್ತಾರೆ ಸ್ಥಳೀಯರು.

ಒಂದೇ ಜಾತಿಯ ಮೀನುಗಳು
ಶಿಂಬ್ರ ನೂತನ ಸೇತುವೆಯವರೆಗೂ ಸತ್ತಿರುವ ಮೀನುಗಳು ಪತ್ತೆಯಾಗಿವೆ. ಈಗಾಗಲೇ ಹಲವಾರು ಮೀನುಗಳನ್ನು ಹದ್ದು, ಕೊಕ್ಕರೆಗಳು ತಿಂದಿವೆ. ಸತ್ತಿರುವ ಮೀನುಗಳೆಲ್ಲಾ “ಇಪೆ’ಎಂದು ಕರೆಯಲ್ಪಡುವ ಮೀನುಗಳು. ಇವು ತೀರಾ ಸಣ್ಣ ಗಾತ್ರದ ಮೀನುಗಳಲ್ಲ. ದೊಡ್ಡದಿವೆ. ನದಿನೀರು ಈಗ ಉಪ್ಪಾಗಿದೆ. ಉಪ್ಪುನೀರಿನಲ್ಲಿ ನದಿಯ ಮೀನುಗಳು ಸಾಯುವುದಿಲ್ಲ. ಇಷ್ಟಕ್ಕೂ ಒಂದೇ ಜಾತಿಗೆ ಸೇರಿದ ಮೀನುಗಳು ಸತ್ತಿರುವುದು ಹೆಚ್ಚು ಕುತೂಹಲ ಮೂಡಿಸಿದೆ. ಮೀನುಗಳನ್ನು ಪರಿಶೀಲಿಸುವುದಾದರೆ ಕೆಲವು ಮೀನುಗಳನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿಟ್ಟಿದ್ದೇವೆ ಎಂದು ಗಣೇಶ್‌ರಾಜ್‌ ತಿಳಿಸಿದ್ದಾರೆ.

ಜಿಲ್ಲಾಡಳಿತ ಪರಿಶೀಲಿಸಲಿ
ನದಿ ನೀರಿನಲ್ಲೇನಾದರೂ ಕಶ್ಮಲ ತುಂಬಿದ ಪರಿಣಾಮವಾಗಿ ಮೀನುಗಳು ಸತ್ತಿವೆಯೇ ಅಥವಾ ಇನ್ನಾವುದೇ ಬೇರೆ ಕಾರಣದಿಂದ ಸತ್ತಿವೆಯೇ ಎಂಬುದನ್ನು ಜಿಲ್ಲಾಡಳಿತ ಪರಿಶೀಲಿಸಬೇಕು. ಸ್ಥಳೀಯರ ಸಂಶಯ ದೂರ ಮಾಡಬೇಕು ಎಂದು ಗಣೇಶ್‌ರಾಜ್‌ ಸರಳೇಬೆಟ್ಟು ಮತ್ತು ಜಯಶೆಟ್ಟಿ ಬನ್ನಂಜೆ ಅವರು  ಆಗ್ರಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next