Advertisement

ನಗರಕ್ಕೆ ಹರೇಕಳ ಡ್ಯಾಂ ಆಸರೆ: ಜಲಶುದ್ಧೀಕರಣಾಗಾರ ನಿರ್ಮಾಣ

04:30 PM May 26, 2023 | Team Udayavani |

ಮಹಾನಗರ: ನೇತ್ರಾವತಿ ನದಿಗೆ ನಿರ್ಮಿಸಿರುವ ಹರೇಕಳ ಡ್ಯಾಂ ಸಮೀಪದ ಅಡ್ಯಾರ್‌ನಲ್ಲಿ 100 ಎಂಎಲ್‌ಡಿ ಸಾಮರ್ಥ್ಯದ ನೂತನ ಜಲಶುದ್ಧೀಕರಣಗಾರ ಹಾಗೂ ಯಂತ್ರಾಗಾರ ನಿರ್ಮಿಸುವ ಮಹತ್ವದ ನಿರ್ಧಾರವನ್ನು ಮಂಗಳೂರು ಮಹಾನಗರ ಪಾಲಿಕೆ ಕೈಗೆತ್ತಿಕೊಂಡಿದೆ.

Advertisement

ಈ ಮೂಲಕ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ತುಂಬೆ ವೆಂಟೆಡ್‌ ಡ್ಯಾಂನ ಜತೆಗೆ ಹರೇಕಳ ಡ್ಯಾಂ ನೀರನ್ನು ಕೂಡ ಬಳಕೆ ಮಾಡಲು ಸಾಧ್ಯವಾಗಲಿದ್ದು, ನೀರಿನ ಕೊರತೆ ತಪ್ಪಿಸಲು ಅನುಕೂಲವಾಗಲಿದೆ.
ಅಡ್ಯಾರ್‌ ಬಳಿ 10 ಎಕರೆ ಸರಕಾರಿ ಜಾಗವನ್ನು 2021ರ ಆಗಸ್ಟ್‌ 23ರಂದು ಮಂಗಳೂರು ಸಹಾಯಕ ಆಯುಕ್ತರು ಮಂಗಳೂರು ಪಾಲಿಕೆಗೆ ನೀಡಿದ್ದಾರೆ. ಇಲ್ಲಿ ಜ್ಯಾಕ್‌ವೆಲ್‌, ಪಂಪಿಂಗ್‌ ಯಂತ್ರೋಪಕರಣ, 100 ಎಂಎಲ್‌ಡಿ ಜಲಶುದ್ಧೀಕರಣಗಾರ ಹಾಗೂ ಅಡ್ಯಾರ್‌ ಬಳಿ ಹಾಲಿ ಇರುವ ಏರು ಕೊಳವೆಗೆ ಜೋಡಣೆ ಇತ್ಯಾದಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಪಾಲಿಕೆ ನಿರ್ಧರಿಸಿದೆ.

ಮಂಗಳೂರು ನಗರಕ್ಕೆ ಸಗಟು ನೀರಿನ ಬೇಡಿಕೆ ಹಾಗೂ ಪೂರೈಕೆಯು ಚಾಲನೆಯಲ್ಲಿರುವ 24/7 ನೀರು ಸರಬರಾಜು ಯೋಜನೆ ಅನುಷ್ಠಾನದ ಅನಂತರ 2023ಕ್ಕೆ ಸುಮಾರು 160 ಎಂಎಲ್‌ಡಿ ಹಾಗೂ 2031ಕ್ಕೆ ಸುಮಾರು 200 ಎಂಎಲ್‌ಡಿ ಎಂದು ಅಂದಾಜಿಸಲಾಗಿದೆ. ಆದರೆ ಈಗ ನಗರಕ್ಕೆ ಸರಬರಾಜು ಆಗುತ್ತಿರುವ ನೀರಿನ ಪ್ರಮಾಣ ಸುಮಾರು 142 ಎಂಎಲ್‌ಡಿ ಆಗಿದ್ದು, ನೀರಿನ ಪೂರೈಕೆ ಪ್ರಮಾಣವನ್ನು ಹೆಚ್ಚಿಸುವ ಆವಶ್ಯಕತೆ ಇದೆ. ಹೀಗಾಗಿ ಹೆಚ್ಚುವರಿ ನೀರು ಪಡೆಯಲು ಪಾಲಿಕೆ ಮುಂದಡಿ ಇಟ್ಟಿದೆ.

ಹರೇಕಳ ಡ್ಯಾಂನ ಸಾಮರ್ಥ್ಯ ತುಂಬೆ ಡ್ಯಾಂನಷ್ಟೇ ಇದೆ. ಇದರ ನೀರಿನ ಗುಣಮಟ್ಟ ನಿಗದಿತ ಮಾನದಂಡಕ್ಕೆ ಅನುಗುಣವಾಗಿಯೇ ಇದೆ. ಜತೆಗೆ ಇದು ನಗರಕ್ಕೆ ಸಮೀಪವಾಗಿದ್ದು, ತುಂಬೆ ಸ್ಥಾವರಕ್ಕೆ ಹೋಲಿಸಿದರೆ ಮುಖ್ಯ ಕೊಳವೆಯ ಉದ್ದ 10 ಕಿ.ಮೀ ಕಡಿಮೆ ಆಗುತ್ತದೆ ಎಂಬುದು ಪಾಲಿಕೆ ಲೆಕ್ಕಾಚಾರ

ಹರೇಕಳ ಡ್ಯಾಂ-ನಗರಕ್ಕೆ
2ನೇ ನೀರಿನ ಮೂಲ
ಮಂಗಳೂರು 24/7 ನೀರು ಸರಬರಾಜು ಯೋಜನೆಯ ಡಿಪಿಆರ್‌ 2018ರಲ್ಲಿ ತಯಾರಿಸಲಾಗಿದೆ. ಹಾಲಿ ಇರುವ 80 ಹಾಗೂ 81.7 ಎಂಎಲ್‌ಡಿ ಯೋಜನೆಗಳ ಮೂಲಸ್ಥಾವರ ಹಾಗೂ ರಾಮಲ್‌ಕಟ್ಟೆ ಜಲ ಶುದ್ಧೀಕರಣಗಾರಗಳ ಬಳಿ ಅಗತ್ಯದಷ್ಟು ಖಾಲಿ ಜಾಗ ಲಭ್ಯವಿಲ್ಲದೆ ಸಗಟು ನೀರು ಸರಬರಾಜು ಯೋಜನೆ ಕೈಗೆತ್ತಿಕೊಳ್ಳಲು ಆಗಿರಲಿಲ್ಲ. ಆದರೆ, ಈಗ 2023ರಲ್ಲಿ ಹಾಲಿ ಮೂಲ ಸ್ಥಾವರ ತುಂಬೆಯಿಂದ 10 ಕಿ.ಮೀ ಕೆಳಭಾಗದಲ್ಲಿ (ಅಡ್ಯಾರ್‌ ಬಳಿ-ಹರೇಕಳ ಡ್ಯಾಂ) ಸಣ್ಣ ನೀರಾವರಿ ಇಲಾಖೆ ವತಿಯಿಂದ ವೆಂಟೆಡ್‌ ಡ್ಯಾಂ ನಿರ್ಮಿಸಲಾಗಿದ್ದು, ಇದನ್ನು ಮಂಗಳೂರು ನಗರಕ್ಕೆ ಎರಡನೇ ನೀರಿನ ಮೂಲವಾಗಿ ಪರಿಗಣಿಸಲು ಆಡಳಿತ ವ್ಯವಸ್ಥೆ ತೀರ್ಮಾನಿಸಿದೆ.

Advertisement

ಜಲಸಿರಿ ಯೋಜನೆ
ಶೇ.40ರಷ್ಟು ಪೂರ್ಣ
ರಾಜ್ಯ ಸರಕಾರವು ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌ ನೆರವಿನೊಂದಿಗೆ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಕಾರ್ಯಕ್ರಮದಡಿ (ಜಲಸಿರಿ) ಕೆಯುಐಡಿಎಫ್‌ಸಿ ವತಿಯಿಂದ ಮಂಗಳೂರು ನಗರದಲ್ಲಿ 24/7 ಕುಡಿಯುವ ನೀರು ಸರಬರಾಜು ಕಾಮಗಾರಿಯನ್ನು ಅನುಷ್ಠಾನಿಸಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯ ನಿರ್ಮಾಣ ವೆಚ್ಚ 587.67 ಕೋ.ರೂ. ಹಾಗೂ ಕಾರ್ಯಾಚರಣೆ ಮೊತ್ತ 204.75 ಕೋ.ರೂ ಆಗಿದೆ. ಪ್ರಸ್ತುತ ಇದರ ಭೌತಿಕ ಪ್ರಗತಿ ಶೇ.40.77 ಹಾಗೂ ಆರ್ಥಿಕ ಪ್ರಗತಿ ಶೇ.44ರಷ್ಟು ಆಗಿದೆ.

ಪಾಲಿಕೆಯಿಂದ 19.20 ಕೋ.ರೂ.
ಅಡ್ಯಾರ್‌ನಲ್ಲಿ ನೂತನ ಜಲಶುದ್ಧೀಕರಣಗಾರ ಹಾಗೂ ಯಂತ್ರಾಗಾರ ನಿರ್ಮಿಸುವ ಒಟ್ಟು ಕಾಮಗಾರಿಗಳಿಗೆ 126.20 ಕೋ.ರೂ ಅಂದಾಜಿಸಲಾಗಿದೆ. ಪ್ರಗತಿಯಲ್ಲಿರುವ 24/7 ನೀರು ಸರಬರಾಜು ಯೋಜನೆಯಡಿ ಸುಮಾರು 96.50 ಕೋ.ರೂ ಲಭ್ಯವಿದೆ. ಜಾಕ್ವೆಲ್‌ ನಿರ್ಮಾಣಕ್ಕಾಗಿ 10 ಕೋ.ರೂ ನೀಡಲು ನೀಡುವಂತೆ ಸ್ಮಾರ್ಟ್‌ಸಿಟಿಗೆ ಕೋರಲಾಗಿದೆ. ಹೀಗಾಗಿ, ಬಾಕಿ ಮೊತ್ತ ಸುಮಾರು 19.20 ಕೋ.ರೂ ಗಳನ್ನು ಮಂಗಳೂರು ಪಾಲಿಕೆ ಭರಿಸಬೇಕಾಗಿದೆ.

ಪಾಲಿಕೆ ಸಭೆಯಲ್ಲಿ ಅನುಮೋದನೆ
ಹರೇಕಳ ಡ್ಯಾಂ ಸಮೀಪದ ಅಡ್ಯಾರ್‌ನಲ್ಲಿ 100 ಎಂಎಲ್‌ಡಿ ಸಾಮರ್ಥಯದ ಜಲಶುದ್ಧೀಕರಣಗಾರ ಹಾಗೂ ಯಂತ್ರಾಗಾರ ನಿರ್ಮಿಸಲು ಮಂಗಳೂರು ಪಾಲಿಕೆ ಈಗಾಗಲೇ ನಿರ್ಧರಿಸಿದೆ. 126.20 ಕೋ.ರೂ ಗಳ ಅಂದಾಜು ವೆಚ್ಚದ ಈ ಯೋಜನೆಯಲ್ಲಿ 19.20 ಕೋ.ರೂ. ಪಾಲಿಕೆ ಭರಿಸಬೇಕಾಗುತ್ತದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆಯಲಾಗುವುದು.
– ಪ್ರೇಮಾನಂದ ಶೆಟ್ಟಿ, ಮುಖ್ಯ ಸಚೇತಕರು, ಮಂಗಳೂರು ಪಾಲಿಕೆ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next