ಉಡುಪಿ: ಸಾಮಾನ್ಯವಾಗಿ ಸಾರ್ವಜನಿಕರ ರಕ್ಷಣೆ, ಕಾನೂನು ಸುವ್ಯವಸ್ಥೆಗಾಗಿ ಲಾಠಿ, ಬಂದೂಕು ಹಿಡಿಯುವ ಪೊಲೀಸರು ಬುಧವಾರ ಮಾತ್ರ ಕೈಯಲ್ಲಿ ಹಾರೆ, ಪಿಕಾಸು ಮತ್ತು ನೀರು ತುಂಬಿದ ಬಕೆಟ್‌ಗಳನ್ನು ಹಿಡಿದು ಹಸಿರು ಬೆಳೆಸುವ ಕೆಲಸದಲ್ಲಿ ತೊಡಗಿದ್ದರು.
ಎಸ್‌ಪಿ ನಿಶಾ ಜೇಮ್ಸ್ ಅವರ ಆದೇಶದಂತೆ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಪೊಲೀಸ್ ಠಾಣೆ ಗಳಲ್ಲಿಯೂ ವಿಶ್ವಪರಿಸರ ದಿನ ಆಚರಣೆ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಜರಗಿತು.
ಬೆಳಗ್ಗೆ ಸುಮಾರು ಒಂದು ತಾಸು ಸಮಯವನ್ನು ಪೊಲೀಸ್ ಸಿಬಂದಿ, ಅಧಿಕಾರಿಗಳು ತಮ್ಮ ಕಚೇರಿ ಆವರಣದಲ್ಲಿ ಹಸಿರು ಬೆಳೆಸುವುದಕ್ಕಾಗಿ ಮೀಸಲಿಟ್ಟರು.
ಎಷ್ಟು ಜಾಗ ಲಭ್ಯವಿದೆಯೋ ಅಷ್ಟು ಜಾಗದಲ್ಲಿ ಗಿಡ ನೆಡಬೇಕು. ತೀರಾ ಕಡಿಮೆ ಜಾಗವಿದ್ದರೆ ಹೂವಿನ ಗಿಡವನ್ನಾದರೂ ನೆಡಬೇಕು ಎಂದು ಎಸ್‌ಪಿಯವರು ಸೂಚನೆ ನೀಡಿದ್ದರು. ಹಾಗಾಗಿ ಮೊದಲ ಬಾರಿಗೆ ಎಂಬಂತೆ ಜಿಲ್ಲೆಯ ಪೊಲೀಸ್ ಠಾಣೆಯ ಆವರಣಗಳಲ್ಲಿ ಏಕಕಾಲಕ್ಕೆ ಹಸಿರು ಬೆಳೆಸುವ ಕೆಲಸ ನಡೆಯಿತು.
ಪೊಲೀಸ್ ಠಾಣೆಗಳಲ್ಲಿ 500 ಗಿಡ
ಪೊಲೀಸ್ ಠಾಣೆಗಳಲ್ಲಿ ನೆಡುವುದಕ್ಕಾಗಿ ಅರಣ್ಯ ಇಲಾಖೆಯಿಂದ 500 ಗಿಡಗಳನ್ನು ಕೇಳಿದ್ದೇವೆ. ಉತ್ತಮ ಸ್ಪಂದನೆ ದೊರೆತಿದೆ. ಬಹುತೇಕ ಎಲ್ಲ ಠಾಣೆಗಳಲ್ಲಿಯೂ ಬುಧವಾರ ಗಿಡ ನೆಡಲಾಗಿದೆ. ಠಾಣೆಗಳಲ್ಲಿಯೂ ಹಸಿರು ಪರಿಸರವಿದ್ದರೆ ಅಲ್ಲಿನ ಸಿಬಂದಿ, ಅಲ್ಲಿಗೆ ಆಗಮಿಸುವ ಸಾರ್ವಜನಿಕರಿಗೆ ಉತ್ತಮ ಅನುಭವ ದೊರೆಯುತ್ತದೆ.
-ನಿಶಾ ಜೇಮ್ಸ್ , ಎಸ್‌ಪಿ, ಉಡುಪಿ