Advertisement

ಸ್ವಪಕ್ಷ ಕಾಂಗ್ರೆಸ್ ವಿರುದ್ಧವೇ ಅಸಮಾಧಾನಗೊಂಡ ಹಾರ್ದಿಕ್ ಪಟೇಲ್

06:38 PM Apr 02, 2021 | Team Udayavani |

ಅಹ್ಮದಾಬಾದ್: ಹೋರಾಟಗಾರ ಹಾಗೂ ಯುವ ನಾಯಕ ಹಾರ್ದಿಕ್ ಪಟೇಲ್ ಸ್ವಪಕ್ಷ ಕಾಂಗ್ರೆಸ್ ಸ್ಥಳೀಯ (ಗುಜರಾತ್ ) ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ ತನ್ನನ್ನು ನಿರ್ಲಕ್ಷಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Advertisement

ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ವಪಕ್ಷದ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಪಟೇಲ್, ನನಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ. ಪಕ್ಷದ ಅಧ್ಯಕ್ಷ, ಸಚಿವ, ಇಲ್ಲವೆ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಬೇಕೆನ್ನುವ ಬಯಕೆ ನನ್ನದಲ್ಲ. ಆದರೆ, ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಬೇಕೆನ್ನುವ ಹಂಬಲ ನನ್ನದು. ದೇಶದಲ್ಲಿ ಸದ್ಯ ನಿರುದ್ಯೋಗ, ರೈತರ ಪ್ರತಿಭಟನೆ ಸೇರಿದಂತೆ ಹಲವಾರು ವಿಷಯಗಳ ವಿರುದ್ಧ ಪ್ರತಿಭಟಿಸಬಹುದು. ಆದರೆ, ನಮ್ಮ ರಾಜಕೀಯ ನಾಯಕರ ನಡುವೆ ಇರುವ ಗುಂಪುಗಾರಿಕೆ ಇದನ್ನು ಕಟ್ಟಿಹಾಕುತ್ತಿದೆ ಎಂದಿದ್ದಾರೆ.

ಗುಂಪುಗಾರಿಕೆ ಹಾಗೂ ಹೊಂದಾಣಿಕೆಯ ಕೊರತೆಯ ನಡುವೆಯೇ ನಾನು ಏನಾದರೂ ಮಾಡಬೇಕೆಂದುಕೊಳ್ಳುತ್ತೇನೆ. ಆದರೆ, ಪಕ್ಷದಲ್ಲಿನ ಕೆಲವರಲ್ಲಿ ಅಭದ್ರತೆ ಕಾಡುತ್ತಿದೆ. ಅವರು ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ಇದು ದೇಶದ ದೊಡ್ಡ ಹಾಗೂ ಹಳೆಯ ಪಕ್ಷ. ಈ ಪಕ್ಷದ ಹಿರಿಯ ನಾಯಕರುಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಅವರ ಮೇಲೆ ನನಗೆ ವಿಶ್ವಾಸ ಇದೆ. ಕಡಿಮೆ ಅವಧಿಯಲ್ಲಿ ಉತ್ತಮವಾದದ್ದು ಜರುಗುತ್ತದೆ ಎಂದು ನಾನು ನಂಬಿದ್ದೇನೆ ಎಂದು ಪಟೇಲ್ ಹೇಳಿದ್ದಾರೆ.

ಇನ್ನು ಹಾರ್ದಿಕ್ ಪಟೇಲ್ ಅವರು ಪಾಟೀದಾರ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ನೀಡುವಂತೆ ಗುಜರಾತ್‍ನಲ್ಲಿ ಬಹುದೊಡ್ಡ ಪ್ರತಿಭಟನೆ ನಡೆಸಿದ್ದರು. ಅವರ ಹೋರಾಟ ಇಡೀ ದೇಶದ ಗಮನ ಸೆಳೆದಿತ್ತು. ಈ ಹೋರಾಟದ ಮುಖೇನ ಮುಂಚೂಣೆಗೆ ಬಂದ ಹಾರ್ದಿಕ್ ಅವರನ್ನು 2019ರಲ್ಲಿ ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ಕರೆ ತಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next