ಮುಂಬಯಿ: ಮುಂದಿನ ವರ್ಷದ ಐಪಿಎಲ್ ಬಗ್ಗೆ ಈಗಾಗಲೇ ಕ್ರಿಕೆಟ್ ವಲಯದಲ್ಲಿ ಚರ್ಚೆ ಆರಂಭವಾಗಿದೆ. 2024 ರ ಐಪಿಎಲ್ ನ ಮಿನಿ ಹರಾಜು ಪ್ರಕ್ರಿಯೆ ಮುಂದಿನ ತಿಂಗಳು ನಡೆಯಲಿದೆ. ಈ ಹಿನ್ನೆಲೆಯಲ್ಲಿ ತಂಡಗಳು ಆಟಗಾರರ ಟ್ರೇಡ್ ನಲ್ಲಿ ನಿರತವಾಗಿವೆ.
ಮುಂದಿನ ಋತುವಿನ ಐಪಿಎಲ್ ಗಾಗಿ ಕೆಲ ಆಟಗಾರರನ್ನು ಫ್ರಾಂಚೈಸಿಗಳು ರಿಲೀಸ್ ಮಾಡಿದ್ದು, ಇನ್ನು ಕೆಲ ಆಟಗಾರರನ್ನು ವಿನಿಮಯ ಮಾಡಿಕೊಂಡಿದೆ. ಆಟಗಾರರ ರಿಲೀಸ್ ಪಟ್ಟಿಯಲ್ಲಿ ಕೇಳಿ ಬರುತ್ತಿರುವ ದೊಡ್ಡ ಹೆಸರು ಅಂದರೆ ಅದು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರದು.
ಹರಾಜು ಪ್ರಕ್ರಿಯೆಗೂ ಮುನ್ನ ಟ್ರೇಡ್ ವಿಂಡೋ ಓಪನ್ ಆಗಿದ್ದು, ಇದರಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಮುಂದಾಗಿದೆ.
ಮೂಲಗಳ ಪ್ರಕಾರ ಈ ಬಾರಿಯ ಟ್ರೇಡ್ ನಲ್ಲಿ ದೊಡ್ಡ ಟ್ರೇಡ್ ವೊಂದನ್ನು ಮುಂಬೈ ಮಾಡಲಿದೆ ಎನ್ನಲಾಗಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ಸತತ ಎರಡು ಬಾರಿ ಫೈನಲ್ ಗೆ ಕರೆದೊಯ್ದು, ಒಂದು ಬಾರಿ ಚಾಂಪಿಯನ್ ಪಟ್ಟವನ್ನು ಪಡೆದ ಮುಂಬೈ ಇಂಡಿಯನ್ಸ್ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ಮುಂಬೈಗೆ ಕರೆತರುವ ಯೋಜನೆ ಸಿದ್ದಗೊಂಡಿದೆ ಎನ್ನಲಾಗಿದೆ.
ಗುಜರಾತ್ ಟೈಟಾನ್ಸ್ ಮ್ಯಾನೇಜ್ಮೆಂಟ್ ಹಾರ್ದಿಕ್ ನಡುವೆ ಭಿನ್ನಾಭಿಪ್ರಾಯಗಳಿದ್ದು, ಈ ಕಾರಣದಿಂದ ಹಾರ್ದಿಕ್ ಕಳೆದ ಕೆಲ ಸಮಯದ ಹಿಂದೆಯೇ ಗುಜರಾತ್ ತೊರೆಯುವ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ರೋಹಿತ್ ಶರ್ಮಾ ಅವರ ಬಳಿಕ ಮುಂಬೈ ತಂಡವನ್ನು ಹಾರ್ದಿಕ್ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.
ಟ್ರೇಡಿಂಗ್ ವಿಂಡೋ ನ.26 ರಂದು ಕ್ಲೋಸ್ ಆಗಲಿದ್ದು, ಅಷ್ಟರೊಳಗೆ ವಿಚಾರಕ್ಕೊಂದು ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ.
ಹಾರ್ದಿಕ್ 2015 ರಿಂದ 2021ರ ವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 2022ರಲ್ಲಿ ಗುಜರಾತ್ ಟೈಟಾನ್ಸ್ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಯಿತು. ಬಳಿಕ 2023 ರಲ್ಲಿ ತಂಡವು ಅವರ ನಾಯಕತ್ವದಲ್ಲಿ ರನ್ನರ್ ಅಪ್ ಆಯಿತು.