ಮುಂಬೈ: ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಮ್ ಇಂಡಿಯಾ ತಂಡದಲ್ಲಿನ ಕಿರಿಯರಲ್ಲಿ ಅತ್ಯಂತ ಪ್ರಬುದ್ಧ ನಾಯಕ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಐರ್ಲೆಂಡ್ ವಿರುದ್ಧ ಟಿ 20 ಸರಣಿಗೆ ಬುಧವಾರ 17 ಸದಸ್ಯರ ತಂಡವನ್ನು ಆಯ್ಕೆ ಮಾಡಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ.
ಇತ್ತೀಚೆಗಷ್ಟೇ ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿ ಐಪಿಎಲ್ ಗೆದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸಲಿದ್ದು, ವೇಗಿ ಭುವನೇಶ್ವರ್ ಕುಮಾರ್ ಉಪನಾಯಕರಾಗಿರುತ್ತಾರೆ. ಟೀಂ ಇಂಡಿಯಾ ಜೂನ್ 26 ಮತ್ತು ಜೂನ್ 28 ರಂದು ಡಬ್ಲಿನ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದೆ.
ಇದನ್ನೂ ಓದಿ:ಮೊದಲ ಬಾರಿ ರಾಷ್ಟ್ರೀಯ ತಂಡದ ಕರೆ ಪಡೆದ ಧೋನಿ ಗರಡಿಯ ಹುಡುಗ ರಾಹುಲ್ ತ್ರಿಪಾಠಿ
“ಹಾರ್ದಿಕ್ ಪಾಂಡ್ಯ ಇನ್ನಷ್ಟು ಬೆಳೆಯಲಿ. ಅವರು ಕೇವಲ ಒಂದು ಪಂದ್ಯ ಸರಣಿಗೆ ನಾಯಕರಾಗಿದ್ದರೂ ಸಹ, ಕಿರಿಯ ಸ್ಪರ್ಧಿಗಳ ಪೈಕಿ ಅವರು ಅತ್ಯಂತ ಪ್ರಬುದ್ಧ ನಾಯಕ ಎಂದು ನನಗೆ ಅನ್ನಿಸುತ್ತದೆ. ಟೀಮ್ ಇಂಡಿಯಾ ಪರ ಮೊದಲ ಸರಣಿಗೆ ಅವರಿಗೆ ಶುಭ ಹಾರೈಸುತ್ತೇನೆ” ಎಂದು ಆಕಾಶ್ ಚೋಪ್ರಾ ಕೂ ಮಾಡಿದ್ದಾರೆ.
ಈತನ್ಮಧ್ಯೆ, ಐಪಿಎಲ್ 2022 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ರತಿನಿಧಿಸಿದ್ದ ಬ್ಯಾಟರ್ ರಾಹುಲ್ ತ್ರಿಪಾಠಿ ಅವರು ತಮ್ಮ ಮೊದಲ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಕೂಡ ತಂಡಕ್ಕೆ ಮರಳಲಿದ್ದಾರೆ.
ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.