ಮುಂಬೈ: ವಿಶ್ವ ಕ್ರಿಕೆಟ್ ನಲ್ಲಿ ಹೊಸ ಹೊಸ ಬ್ಯಾಟಿಂಗ್ ಶಾಟ್ ಗಳು ಪರಿಚಯ ಆಗುತ್ತಿವೆ. ಧೋನಿ ಪರಿಚಯಿಸಿದ ‘ಹೆಲಿಕಾಪ್ಟರ್ ಶಾಟ್’ ಅನ್ನು ಹೊಡೆಯಲು ಅನೇಕರು ಪ್ರಯತ್ನಿಸಿದರೂ ಸಫಲರಾಗಿದ್ದು ಮಾತ್ರ ಕೆಲವರಷ್ಟೇ. ಬುಧವಾರ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಹೊಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ಹೆಲಿಕಾಪ್ಟರ್ ಶಾಟ್ ಬಾರಿಸಿದರು. ಮುಂಬೈ ಇನ್ನಿಂಗ್ಸ್ ನ ಕೊನೆಯ ಓವರ್ ನ ನಾಲ್ಕನೇ ಎಸೆತಕ್ಕೆ ಹಾರ್ದಿಕ್ ಭರ್ಜರಿ ಸಿಕ್ಸ್ ಸಿಡಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಡ್ಯಾರೆನ್ ಬ್ರಾವೊ ಎಸೆತವನ್ನು ಹೆಲಿಕಾಪ್ಟರ್ ಶಾಟ್ ಮೂಲಕ ನೇರ ಪ್ರೇಕ್ಷಕರ ಗ್ಯಾಲರಿಗೆ ಸಿಡಿಸಿದ ಸಿಕ್ಸರ್ ವಿಡಿಯೋ ಈಗ ವೈರಲ್ ಆಗಿದೆ.
‘ಹೆಲಿಕಾಪ್ಟರ್ ಶಾಟ್’ ಪರಿಚಯಿಸಿದ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧವೇ ಈ ಶಾಟ್ ಹೊಡೆದ ಹಾರ್ದಿಕ್ ಮುಂಬೈ ಇಂಡಿಯನ್ಸ್ ಗೆಲುವಿಗೆ ಪ್ರಮುಖ ಕಾರಣರಾದರು. ಕೇವಲ ಎಂಟು ಎಸೆತಗಳಲ್ಲಿ 25 ರನ್ ಗಳಿಸಿ ಅಜೇಯರಾಗುಳಿದ ಅವರು ಬೌಲಿಂಗ್ ವೇಳೆ ಕೇವಲ 20 ರನ್ ನೀಡಿ ಧೋನಿ ಸಹಿತ ಮೂರು ವಿಕೆಟ್ ಕಿತ್ತರು, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಹಾರ್ದಿಕ್ ಪಾಲಾಯಿತು.