Advertisement

ಪಾಂಡ್ಯ ಪುನರಾಗಮನಕ್ಕೆ ಹಿನ್ನಡೆ

10:07 AM Jan 12, 2020 | Team Udayavani |

ಮುಂಬಯಿ: ಭಾರತದ ಮುಂದೆ ಪೂರ್ಣ ಪ್ರಮಾಣದ ಕ್ರಿಕೆಟ್‌ ಸರಣಿಯೊಂದು ಕಾದಿದೆ. ಇದೇ ತಿಂಗಳು ನ್ಯೂಜಿಲ್ಯಾಂಡ್‌ ಪ್ರವಾಸ ಕೈಗೊಳ್ಳಲಿರುವ ಟೀಮ್‌ ಇಂಡಿಯಾ ಅಲ್ಲಿ 5 ಟಿ20, 3 ಏಕದಿನ, 2 ಟೆಸ್ಟ್‌ ಪಂದ್ಯ ಗಳನ್ನಾಡಲಿದೆ. ಇದಕ್ಕಾಗಿ ರವಿವಾರ ಮುಂಬಯಿಯಲ್ಲಿ ತಂಡಗಳನ್ನು ಪ್ರಕಟಿಸಲಾಗುವುದು.

Advertisement

ಇದು ಸುದೀರ್ಘ‌ ಪ್ರವಾಸವಾದ್ದರಿಂದ 15ರ ಬದಲು 16 ಅಥವಾ 17 ಆಟಗಾರರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ.

ಶಸ್ತ್ರಚಿಕಿತ್ಸೆಗೊಳಗಾಗಿ ಸುದೀರ್ಘ‌ ವಿಶ್ರಾಂತಿಯಲ್ಲಿದ್ದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಏಕದಿನ ಕ್ರಿಕೆಟಿಗೆ ಮರಳಬಹುದೇ ಎಂಬ ನಿರೀಕ್ಷೆಗೆ ಹಿನ್ನಡೆಯಾಗಿದೆ. ಅವರು ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದು, ಭಾರತ “ಎ’ ತಂಡದೊಂದಿಗಿನ ನ್ಯೂಜಿಲ್ಯಾಂಡ್‌ ಪ್ರವಾಸದಿಂದಲೂ ಹೊರಬಿದ್ದಿದ್ದಾರೆ. ಪಾಂಡ್ಯ ಬದಲು ವಿಜಯ್‌ ಶಂಕರ್‌ ಅವರನ್ನು ಸೇರಿಸಿಕೊಳ್ಳಲಾಗಿದೆ.

ಟಿ20ಗೆ ಹೆಚ್ಚಿನ ಆದ್ಯತೆ
ಇದು ಟಿ20 ವಿಶ್ವಕಪ್‌ ವರ್ಷವಾದ್ದರಿಂದ ಭಾರತ ಈ ತಂಡದ ಆಯ್ಕೆಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದರಲ್ಲಿ ಅನುಮಾನವಿಲ್ಲ. ಶುಕ್ರವಾರವಷ್ಟೇ ಶ್ರೀಲಂಕಾ ವಿರುದ್ಧ ಸರಣಿ ಜಯಿಸಿದ ತಂಡವನ್ನೇ ಮುಂದುವರಿಸುವುದು ಬಹುತೇಕ ಖಚಿತ. ಹೆಚ್ಚುವರಿ ಯಾಗಿ ಯಾರು ಸೇರ್ಪಡೆಯಾಗಬಹುದು ಎಂಬು ದೊಂದು ಕುತೂಹಲ.

ಸೂರ್ಯಕುಮಾರ್‌ ಯಾದವ್‌ಗೆ ಅವಕಾಶ?
ಟಿ20 ತಂಡವನ್ನೇ ಏಕದಿನ ಸರಣಿಗೆ ಮುಂದುವರಿಸುವ ಸಾಧ್ಯತೆ ಇದೆ. ಇಲ್ಲಿ ಸದ್ಯ ಕೇದಾರ್‌ ಜಾಧವ್‌ ಲೆಕ್ಕದ ಭರ್ತಿಯ ಆಟಗಾರನಾಗಿ ಉಳಿದುಕೊಂಡಿದ್ದು, ಇವರನ್ನು ಮುಂದುವರಿಸಬೇಕೇ ಎಂಬ ಪ್ರಶ್ನೆ ಉದ್ಭವಿಸಿದೆ. ಇಲ್ಲವಾ ದರೆ ಮುಂಬಯಿಯ “ಪವರ್‌ ಹಿಟ್ಟರ್‌’ ಸೂರ್ಯಕುಮಾರ್‌ ಯಾದವ್‌ ಅವರಿಗೆ ಬಾಗಿಲು ತೆರೆಯಲೂಬಹುದು.

Advertisement

ಸಂಜು ಸ್ಯಾಮ್ಸನ್‌ ಏಕದಿನ ಹಾಗೂ ಟಿ20 ತಂಡಗಳಲ್ಲಿ ಮೀಸಲು ಕೀಪರ್‌ ಆಗಿ ಉಳಿದುಕೊಳ್ಳುವುದು ಖಚಿತ. ಯಾದವ್‌ ಮತ್ತು ಸ್ಯಾಮ್ಸನ್‌ ಇಬ್ಬರೂ ನ್ಯೂಜಿಲ್ಯಾಂಡ್‌ ಪ್ರವಾಸದ ಭಾರತ “ಎ’ ತಂಡದಲ್ಲಿದ್ದಾರೆ.

ಕುಲದೀಪ್‌ ಅಥವಾ ಸೈನಿ?
ಹಾಗೆಯೇ ತೃತೀಯ ಸ್ಪಿನ್ನರ್‌ ಬೇಕೋ ಅಥವಾ ಹೆಚ್ಚುವರಿಯಾಗಿ 5ನೇ ಪೇಸ್‌ ಬೌಲರ್‌ನನ್ನು ಸೇರಿಸಿಕೊಳ್ಳುವುದೋ ಎಂಬ ಪ್ರಶ್ನೆ ಇದೆ. ನ್ಯೂಜಿಲ್ಯಾಂಡ್‌ ಟ್ರ್ಯಾಕ್‌ ವೇಗಿಗಳಿಗೆ ಹೆಚ್ಚಿನ ನೆರವು ನೀಡಲಿದ್ದು, ಭಾರತ ಈಗಾಗಲೇ ಪ್ರಬಲ ಪಡೆಯೊಂದನ್ನು ಹೊಂದಿದೆ. ಇಶಾಂತ್‌ ಶರ್ಮ, ಮೊಹಮ್ಮದ್‌ ಶಮಿ, ಜಸ್‌ಪ್ರೀತ್‌ ಬುಮ್ರಾ ಮತ್ತು ಉಮೇಶ್‌ ಯಾದವ್‌ ಆಯ್ಕೆಯಲ್ಲಿ ಯಾವ ಅನುಮಾನವೂ ಇಲ್ಲ. ಇವರ ಸಾಲಿಗೆ ನವದೀಪ್‌ ಸೈನಿ ಸೇರಲೂಬಹುದು. ಆಗ ಸ್ಪಿನ್‌ ವಿಭಾಗದಲ್ಲಿ ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ ಮಾತ್ರ ಉಳಿಯುತ್ತಾರೆ.

ಮೂರನೇ ಓಪನರ್‌ ಯಾರು?
ಭಾರತದ ಟೆಸ್ಟ್‌ ತಂಡದ ಆಯ್ಕೆಯ ವೇಳೆ ಎರಡು ಮುಖ್ಯ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಮೊದಲನೆಯದು ತೃತೀಯ ಓಪನರ್‌ ಯಾರು ಎಂಬುದು. ರೋಹಿತ್‌ ಶರ್ಮ, ಮಾಯಾಂಕ್‌ ಅಗರ್ವಾಲ್‌ ಈಗಾಗಲೇ ಸೆಟ್‌ ಆಗಿದ್ದಾರೆ. ಮೀಸಲು ಆರಂಭಿಕನಾಗಿ ಕೆ.ಎಲ್‌. ರಾಹುಲ್‌ ಸ್ಥಾನ ಸಂಪಾದಿಸಬಹುದು. ಇಲ್ಲಿ ಪಂಜಾಬ್‌ನ ಶುಭಮನ್‌ ಗಿಲ್‌ ಕೂಡ ರೇಸ್‌ನಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next