ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ನಿರೀಕ್ಷೆ ಹುಸಿಯಾಗಿದೆ. ಗಲಭೆ ಪ್ರಕರಣದಲ್ಲಿ ತಮ್ಮ ವಿರುದ್ಧದ ತೀರ್ಪಿಗೆ ತಡೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಅವರಿಗೆ, ಅಲ್ಲೂ ಹಿನ್ನಡೆಯಾಗಿದೆ. ತಡೆ ತರಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ನಿರ್ಧಾರ ಪ್ರಶ್ನಿಸಿ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಮಂಗಳ ವಾರ ಅದರ ತ್ವರಿತ ವಿಚಾರಣೆಗೆ ಕೋರಿಕೊಂಡಾಗ, ಸುಪ್ರೀಂ ಕೋರ್ಟ್ ಅದಕ್ಕೆ ಸೊಪ್ಪು ಹಾಕಿಲ್ಲ. ಅರ್ಜಿಯ ತ್ವರಿತ ವಿಚಾರಣೆಯ ಅಗತ್ಯವೇನಿದೆ ಎಂದು ಪ್ರಶ್ನಿಸಿರುವ ನ್ಯಾಯಪೀಠ, ಹಾರ್ದಿಕ್ ಕೋರಿಕೆಯನ್ನು ತಿರಸ್ಕರಿಸಿದೆ. ಹಾರ್ದಿಕ್‌ಗಾದ ಹಿನ್ನಡೆ ಬಗ್ಗೆ ವ್ಯಂಗ್ಯವಾಡಿರುವ ಗುಜರಾತ್ ಸಿಎಂ ರೂಪಾಣಿ, “ಸುಪ್ರೀಂ ಕೋರ್ಟ್ ನಿರ್ಧಾರದಿಂದ ಹಾರ್ದಿಕ್‌ಗೆ ವಾಸ್ತವದಲ್ಲಿ ನೆಮ್ಮದಿಯೇ ಆಗಿದೆ. ಇಲ್ಲದಿದ್ದರೆ, ಅವರು ಚುನಾವಣೆಯಲ್ಲಿ ಸೋತು ಮರ್ಯಾದೆ ಕಳೆದುಕೊಳ್ಳಬೇಕಾಗಿತ್ತು’ ಎಂದಿದ್ದಾರೆ.