ಸಂಡೂರು: ಕಠಿಣ ಪರಿಶ್ರಮ ಮತ್ತು ಶಿಸ್ತು ಉನ್ನತಸ್ಥಾನಕ್ಕೆ ತೆಗೆದುಕೊಂಡು ಹೋಗಲು ಕಾರಣವಾಗುತ್ತದೆ. ಅಂಥ ಪರಿಶ್ರಮ ಮತ್ತು ಶಿಸ್ತನ್ನು ಪಾಲಿಸಿ ಕೆ.ಎ.ಎಸ್. ಉತ್ತೀರ್ಣರಾಗಿ ತಹಶೀಲ್ದಾರ್ ಹುದ್ದೆಯನ್ನು ಪಡೆದ ನಮ್ಮ ಶಾಲೆಯ ವಿದ್ಯಾರ್ಥಿನಿ ನೇತ್ರಾವತಿ ವಿ.ಕೆ.ಯಾಗಿದ್ದಾರೆ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಕಾರ್ಯದರ್ಶಿ ಚಿದಂಬರ್ ನಾನಾವಟೆ ತಿಳಿಸಿದರು.
ಅವರು ಪಟ್ಟಣದ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ 12 ವರ್ಷಗಳ ಕಾಲ ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಶಿಕ್ಷಣ ಪಡೆದು ಇಂದು ತಹಶೀಲ್ದಾರ್ ಆಗಿ ಆಯ್ಕೆಯಾದ ಸಂಡೂರಿನ 2ನೇ ವಾರ್ಡ್‌ನ ವಿದ್ಯಾರ್ಥಿನಿ ನೇತ್ರಾವತಿ. ವಿಕೆ.ಯವರನ್ನು ಸನ್ಮಾನಿಸಿ ಮಾತನಾಡಿ 12 ವರ್ಷಗಳಲ್ಲಿ ನಮ್ಮ ಶಾಲೆಯ ತತ್ವದಂತೆ ಶಿಕ್ಷಣ ಪಡೆದು ಇಂದು ಉನ್ನತಸ್ಥಾನಕ್ಕೆ ಏರಿದ್ದು ಶಾಲೆಗೆ, ಶಿಕ್ಷಕರಿಗೆ, ಪಾಲಕರಿಗೆ ಹಾಗೂ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ನೇತ್ರಾವತಿ ವಿ.ಕೆ. ಮಾತನಾಡಿ, ಶಿಸ್ತು, ಛಲ, ಸತತ ಪ್ರಯತ್ನ ಇದ್ದಲ್ಲಿ ಹಾಗೂ ನಿರ್ದಿಷ್ಟವಾದ ಗುರಿ ಇಟ್ಟುಕೊಂಡು ಪರಿಶ್ರಮ ಪಟ್ಟಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಇಂದು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐದನೇ ರ್‍ಯಾಂಕ್ ಪಡೆದು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ (24) ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದೇನೆ ಎಂದರೆ ಹಿರಿಯರ, ಗುರುಗಳ ಮಾರ್ಗ ದರ್ಶನದ ಜೊತೆಗೆ ಛಲ ಮತ್ತು ಸತತ ಪ್ರಯತ್ನದಿಂದ ಇದು ಸಾಧ್ಯ.
ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಈ ದಾರಿಯಲ್ಲಿ ಸಾಗಿದಾಗ ಅದು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಆಡಳಿತಾಧಿಕಾರಿ ಕುಮಾರ ನಾನಾವಟೆಯವರು ಮಾತನಾಡಿ, ಕುಮಾರಿ ನೇತ್ರಾವತಿ ನಮ್ಮ ಶಾಲೆ ವಿದ್ಯಾರ್ಥಿನಿಯಾಗಿದ್ದಾಗ ಕ್ರಿಯಾಶೀಲ ಹಾಗೂ ಹಸನ್ಮುಖೀಯ ವಿದ್ಯಾರ್ಥಿಯಾಗಿದ್ದು ಬೋಧಿ ಸುವ ಗುರುಗಳಿಗೆ ನೆಚ್ಚಿನ ವಿದ್ಯಾರ್ಥಿಯಾಗಿದ್ದಳು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಚಿಕ್ಕಂದಿನಿಂದ ನಿಷ್ಠೆ ಮತ್ತು ಪ್ರಾಮಾಣಿಕ ತನದಿಂದ ತನ್ನನ್ನು ತಾನು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದರ ಪರಿಣಾಮವಾಗಿ ಇಂದು ಉನ್ನತ ಹುದ್ದೆಯನ್ನು ಅಲಂಕರಿಸಿರುವುದು. ನಮ್ಮ ಸಂಸ್ಥೆಯ ವಿದ್ಯಾರ್ಥಿಯಾಗಿ ಹಾಗೂ ಸಂಡೂರಿನ ಮಗಳಾಗಿರುವುದು ನಮ್ಮಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿ ಕುಮಾರಿ ನೇತ್ರಾವತಿ ವಿ.ಕೆ. ಯವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಗೋಣಿಬಸಪ್ಪ ಪಿ. ಅವರ ತಾಯಿಯವರಾದ ಪಾರ್ವತಿ ವಿ.ಕೆ. ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.