ಧರ್ಮಶಾಲಾ: ಚೆನ್ನೈ ಸೂಪರ್ ಕಿಂಗ್ಸ್ ತಂಡವ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಇದೇ ಮೊದಲ ಬಾರಿಗೆ ಟಿ20 ಕ್ರಿಕೆಟ್ ನಲ್ಲಿ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಪಂಜಾಬ್ ಕಿಂಗ್ಸ್ ವಿರುದ್ಧದ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಧೋನಿ ಇನ್ನಿಂಗ್ಸ ನ ಕೊನೆಯಲ್ಲಿ ಬ್ಯಾಟಿಂಗ್ ಮಾಡಿದರು. ಆದರೆ ಗೋಲ್ಡನ್ ಡಕ್ ಗೆ ಬಲಿಯಾದ ಎಂ.ಎಸ್.ಧೋನಿ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.
ಧೋನಿ ಸಿಎಸ್ ಕೆ ಗಾಗಿ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಿದ್ದು, 1-2 ಓವರ್‌ಗಳಿರುವಾಗ ಹೆಚ್ಚಾಗಿ ಬ್ಯಾಟಿಂಗ್‌ಗೆ ಬರುತ್ತಾರೆ. ಪಂಜಾಬ್ ವಿರುದ್ದದ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಮತ್ತು ಶಾರ್ದೂಲ್ ಠಾಕೂರ್ ಬಳಿಕ ಧೋನಿ ಕ್ರೀಸ್ ಗೆ ಆಗಮಿಸಿದರು. ಅದೂ 19ನೇ ಓವರ್ ನಲ್ಲಿ.
ಧೋನಿ ಈ ನಿರ್ಧಾರಕ್ಕೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಟೀಕೆ ಮಾಡಿದ್ದಾರೆ. ಧೋನಿ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದಕ್ಕಿಂತ ಸಿಎಸ್‌ಕೆ ಅವರ ಬದಲಿಗೆ ಮತ್ತೊಬ್ಬ ವೇಗಿಯನ್ನು ಸೇರಿಸಿಕೊಳ್ಳಬೇಕು ಎಂದು ಹೇಳಿದರು.
“ಎಂಎಸ್ ಧೋನಿ ಅವರು 9 ನೇ ಸ್ಥಾನದಲ್ಲಿ ಬ್ಯಾಟ್ ಮಾಡಲು ಬಯಸಿದರೆ ಆಡಬಾರದು. ಆಡುವ ಬಳಗದಲ್ಲಿ ಅವರಿಗಿಂತ ವೇಗದ ಬೌಲರ್ ಅನ್ನು ಸೇರಿಸುವುದು ಉತ್ತಮ. ತಂಡದಲ್ಲಿ ಅವರೇ ನಿರ್ಧಾರ ತೆಗೆದು ಕೊಳ್ಳುವವರಾಗಿದ್ದಾರೆ, ಬ್ಯಾಟಿಂಗ್ ಗೆ ಬಾರದೆ ಅವರ ತಮ್ಮ ತಂಡಕ್ಕೆ ಹಿನ್ನಡೆಯಾಗುವಂತೆ ಮಾಡಿದ್ದಾರೆ” ಎಂದು ಭಜ್ಜಿ ಹೇಳಿದರು.
“ಶಾರ್ದೂಲ್ ಠಾಕೂರ್ ಅವರಿಗಿಂತ ಮುಂದೆ ಬಂದರು. ಠಾಕೂರ್ ಅವರು ಧೋನಿಯಂತೆ ಹೊಡೆತಗಳನ್ನು ಹೊಡೆಯಲು ಸಾಧ್ಯವಿಲ್ಲ. ಧೋನಿ ಏಕೆ ಈ ತಪ್ಪು ಮಾಡಿದರು ಎಂದು ನನಗೆ ಅರ್ಥವಾಗುತ್ತಿಲ್ಲ. ಅವರ ಅನುಮತಿಯಿಲ್ಲದೆ ಏನೂ ಆಗುವುದಿಲ್ಲ ಮತ್ತು ಅವರನ್ನು ಕೆಳ ಕ್ರಮಾಂಕದಲ್ಲಿ ಕಳುಹಿಸುವ ಈ ನಿರ್ಧಾರವನ್ನು ಬೇರೆಯವರು ತೆಗೆದುಕೊಂಡಿದ್ದಾರೆ ಎಂದು ಒಪ್ಪಿಕೊಳ್ಳಲು ನಾನು ಸಿದ್ಧನಿಲ್ಲ” ಎಂದು ಹರ್ಭಜನ್ ಸಿಂಗ್ ಹೇಳಿದರು.