Advertisement

ಸಾಗರ: ಕೆಪಿಸಿಯಿಂದ 3.30 ಕೋಟಿ ರೂ.ಗಳ ಬಾಕಿ ಪಾವತಿ; ಸಿಎಂಗೆ ಹಾಲಪ್ಪ ಮನವಿ

05:06 PM Aug 24, 2022 | Kavyashree |

ಸಾಗರ: ಶರಾವತಿ ಕಣಿವೆ ವ್ಯಾಪ್ತಿಯ ಕೆಪಿಸಿ ಅಧೀನದಲ್ಲಿರುವ ನಿಗಮಕ್ಕೆ ಉಪಯೋಗವಿಲ್ಲದ ಶಿಥಿಲಾವಸ್ಥೆಯ ಮನೆಗಳನ್ನು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ವಹಿಸಿಕೊಡಬೇಕು. ಕೆಪಿಸಿ ನಿಗಮದಿಂದ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ಬರಬೇಕಾದ ಕಂದಾಯ ಬಾಕಿ 3.30 ಕೋಟಿ ರೂ.ಗಳನ್ನು ಪಾವತಿ ಮಾಡಬೇಕು. ಈ ಬಗ್ಗೆ ಒಂದು ತಿಂಗಳೊಳಗೆ ಕ್ರಮ ವಹಿಸಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್. ಹರತಾಳು ಹಾಲಪ್ಪ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಯ ಚುನಾಯಿತ ಪ್ರತಿನಿಧಿಗಳ ನಿಯೋಗದೊಂದಿಗೆ ಸಿಎಂ ಕಾರ್ಯದರ್ಶಿ ಹಾಗೂ ಕೆಪಿಸಿ ಪ್ರಧಾನ ವ್ಯವಸ್ಥಾಪಕ ಎಂ.ಎಸ್. ಶ್ರೀಕರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಶರಾವತಿ ಕಣಿವೆ ಯೋಜನೆಯ ಜೋಗ ಕಾರ್ಗಲ್ ಭಾಗದಲ್ಲಿ ಕೆಪಿಸಿ ಒಡೆತನದಲ್ಲಿ ನಿರ್ಮಾಣವಾದ ಸಾಕಷ್ಟು ಮನೆಗಳು ಯಾವುದೇ ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯಲ್ಲಿ ಖಾಲಿ ಬಿದ್ದಿವೆ. ಕೆಪಿಸಿಯು ಉಪಯೋಗವಿಲ್ಲದ ಈ ಮನೆಗಳನ್ನು ಕೆಡವುವ ಬದಲಿಗೆ ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿಗೆ ಲೀಸ್ ಆಧಾರದಲ್ಲಿ ವಹಿಸಿದರೆ ಈ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಸತಿ ರಹಿತರಿಗೆ ಮನೆಗಳನ್ನು ನೀಡಲು ಅನುಕೂಲವಾಗಲಿದೆ ಎಂದರು.

ಕೆಪಿಸಿ ನಿಗಮದಿಂದ ಸ್ಥಳೀಯ ಆಡಳಿತ ಪಟ್ಟಣ ಪಂಚಾಯ್ತಿಗೆ 2005 ರಿಂದ ಈ ತನಕ ಸುಮಾರು 3.30 ಕೋಟಿ ಕಂದಾಯ ಬಾಕಿ ಬರಬೇಕಾಗಿದೆ. ತೆರಿಗೆ ಬಾಕಿಗೆ ಸಂಬಂಧಪಟ್ಟಂತೆ ಕೆಪಿಸಿಯ ವಿರುದ್ಧ ಪಟ್ಟಣ ಪಂಚಾಯ್ತಿಯು ಸಾಗರ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಪ್ರಕರಣವು ಜೋಗ ಕಾರ್ಗಲ್ ಪಟ್ಟಣ ಪಂಚಾಯ್ತಿ ಪರವಾಗಿ ಆಗಿತ್ತು. ಆದರೆ ಕೆಪಿಸಿಯು ಬೆಂಗಳೂರು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು.

ಒಂದು ಸರ್ಕಾರಿ ಸಂಸ್ಥೆಯಾಗಿ ಮತ್ತೊಂದು ಸರ್ಕಾರಿ ಸಂಸ್ಥೆಯ ವಿರುದ್ಧವೇ ನ್ಯಾಯಾಲಯಕ್ಕೆ ಹೋಗುವುದು ಸರಿಯಲ್ಲ. ಜೊತೆಗೆ ಪಟ್ಟಣ ಪಂಚಾಯ್ತಿಯ ನಿರ್ವಹಣೆಗೆ ಆದಾಯವೂ ಪೂರಕವಾಗಿದ್ದು ಆರ್ಥಿಕ ಸಂಕಷ್ಟದಲ್ಲಿದೆ. ಅಭಿವೃದ್ಧಿಯ ದೃಷ್ಟಿಯಿಂದ ಬಾಕಿ ಇರುವ ಕಂದಾಯವನ್ನು ಒಂದು ತಿಂಗಳೊಳಗೆ ಪಾವತಿ ಮಾಡುವಂತೆ ಒತ್ತಾಯಿಸಿದರು.

ಸಚಿವರು ಹಾಗೂ ಆಡಳಿತ ಮಂಡಳಿಯ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಎಂಡಿ ಶ್ರೀಕರ್ ನಿಯೋಗಕ್ಕೆ ಭರವಸೆ ನೀಡಿದರು. ನಂತರ ನಿಯೋಗವು ಇಂಧನ ಸಚಿವ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.

Advertisement

ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಾಸಂತಿ ರಮೇಶ್, ಉಪಾಧ್ಯಕ್ಷ ಪಿ.ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀರಾಜು, ಸದಸ್ಯರಾದ ನಾಗರಾಜ್ ವಾಟೆಮಕ್ಕಿ, ಬಾಲಸುಬ್ರಮಣ್ಯ, ಉಮೇಶ್ ಕೆಮ್ಮಣಗಾರ್, ಲಲಿತಾ ಮಂಜುನಾಥ್, ಜಯಲಕ್ಷ್ಮಿ, ಕೆ.ಸಿ.ಹರೀಶ್, ಸುಜಾತಾ ಜೈನ್, ದೇವರಾಜ್ ಜೈನ್ ಯಡ್ಡಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next