Advertisement
ಇಬ್ಬರು ಗೌರಿಯರು!:
Related Articles
Advertisement
ಪೂಜಾ ವಿಧಾನದಲ್ಲೂ ಭಿನ್ನತೆ:
ಗಣಪನನ್ನು ಪೂಜಿಸುವ ಪದ್ಧತಿಯಲ್ಲೂ ಭಿನ್ನತೆಯಿದೆ. ಒಂದು, ಮೂರು, ಐದು, ಏಳು ಹೀಗೆ ಬೆಸ ಸಂಖ್ಯೆಯ ದಿನಗಳು ಗಣೇಶನನ್ನು ಕೂರಿಸಿ ವಿಸರ್ಜಿಸುವ ಪದ್ಧತಿ ಎಲ್ಲೆಡೆ ಇರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲಿ, ವಿಶೇಷವಾಗಿ ಮಹಾರಾಷ್ಟ್ರ ಮೂಲದ ಸಂಪ್ರದಾಯ ನಡೆಸಿಕೊಂಡು ಬಂದಿರುವ ಮನೆತನಗಳಲ್ಲಿ, ಸರಿಯಾದ ಮುಹೂರ್ತ ನೋಡಿ ಮನೆಯ ಯಜಮಾನ ಗಣಪನ ವಿಗ್ರಹವನ್ನು ತರುತ್ತಾನೆ. ಮುತ್ತೈದೆಯು ಕೆಂಪಾರತಿ ಮಾಡಿ ದೃಷ್ಟಿ ನೀವಾಳಿಸಿ, ಭಕ್ತಿ ಭಾವದಿಂದ ಮನೆಯೊಳಕ್ಕೆ ಬರ ಮಾಡಿಕೊಳ್ಳುತ್ತಾಳೆ. ಪ್ರತಿಷ್ಠಾಪನೆಯವರೆಗೂ ಗಣೇಶನನ್ನು ನೋಡಬಾರದೆಂಬ ಆಚರಣೆಯಿದೆ. ಹಾಗಾಗಿ ವಿಗ್ರಹವನ್ನು ಕೆಂಪು ಬಟ್ಟೆಯಿಂದ ಮುಚ್ಚಿ ತರಲಾಗುತ್ತದೆ. ಪೂಜೆ ಪ್ರಾರಂಭವಾಗುವವರೆಗೂ ವಿಗ್ರಹವನ್ನು ಗೋಡೆಗೆ ಮುಖ ಮಾಡಿ ಇಡಲಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆಗೈದು ಗಣಪನನ್ನು ಪ್ರತಿಷ್ಠಾಪಿಸಲಾಗುತ್ತದೆ. ಕೆಲವರು ಜೇಷ್ಠಾ ಗೌರಿಯ ವ್ರತದಂದು ಹಾಗೂ ಕೆಲವರು ಅನಂತ ಪದ್ಮನಾಭನ ವ್ರತದಂದು, ಸಕಲ ಷೋಡಶೋಪಚಾರ ಪೂಜೆ ಸಹಿತ, ಬಗೆಬಗೆಯ ಭಕ್ಷ್ಯ ಭೋಜನಗಳಿಂದ ಕೂಡಿದ ನೈವೇದ್ಯವನ್ನು ಸಮರ್ಪಿಸಿ, ಗಣೇಶನನ್ನು ವಿಸರ್ಜಿಸುವ ಪದ್ಧತಿಯಿದೆ.
ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ:
ಸಂಕಷ್ಟಹರ, ವಿಘ್ನ ನಿವಾರಕ ಗಣಪನನ್ನು ಸಂತುಷ್ಟಪಡಿಸಿ ವರಗಳನ್ನು ಬೇಡುವ ರೂಢಿಯೂ ಇದೆ. ಮಂಗಳಾರತಿಯ ವೇಳೆಯಲ್ಲಿ ಮನೆಯವರೆಲ್ಲರೂ ಯಥಾಶಕ್ತಿ ಕ್ರಮವಾಗಿ 7, 21, 52 ಹಾಗೂ 108 ಗರಿಕೆಗಳನ್ನು ಅರ್ಪಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ, 21 ಬಾರಿ ಉಠ್ ಬೈಸ್ ಹೊಡೆಯುವ ರೂಢಿ ಚಾಲ್ತಿಯಲ್ಲಿದೆ. ಗಣಪತಿಯನ್ನು ವಿಸರ್ಜಿಸುವ ಸಮಯದಲ್ಲಿ ವಿಗ್ರಹವಿಟ್ಟ ಸ್ಥಾನವನ್ನು ಪಲ್ಲಟಗೊಳಿಸಿದ ನಂತರ ಆ ಜಾಗವನ್ನು ಖಾಲಿ ಇಡಕೂಡದೆಂದು ಯಾವುದಾದರೂ ವಸ್ತು ಅಥವಾ ಪುಸ್ತಕವನ್ನು ಇಡುವುದುಂಟು. ಒಟ್ಟಾರೆ ಈ ಭಾಗಗಳಲ್ಲಿ ವಾರಪೂರ್ತಿ ಗೌರಿ-ಗಣೇಶ ಹಬ್ಬದ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ವಯಸ್ಸು, ಅಂತಸ್ತಿನ ಬೇಧವಿಲ್ಲದೆ ಮಾಡುವ ಸಂಭ್ರಮಾಚರಣೆ ಎಲ್ಲರ ಸಂತಸವನ್ನು ಇಮ್ಮಡಿಗೊಳಿಸುತ್ತದೆ.
ಸುಕ್ಕಿನುಂಡೆ ಸ್ಪೆಷಲ್…
ಮೋದಕ ಪ್ರಿಯ ಗಣಪನಿಗೆಂದು ಎಲ್ಲರ ಮನೆಯಲ್ಲೂ ನೈವೇದ್ಯಕ್ಕೆ ಮೋದಕವನ್ನು ಕಡ್ಡಾಯವಾಗಿ ತಯಾರಿಸಲಾಗುತ್ತದೆ. ಇಲ್ಲಿ ಮತ್ತೂ ಒಂದು ವಿಶೇಷವಿದೆ. ನೈವೇದ್ಯದಲ್ಲಿ ಬೇಯಿಸಿದ ಮೋದಕ, ಕಡುಬು ಮಾತ್ರವಲ್ಲದೆ, ವಿಶೇಷವಾಗಿ ಸುಕ್ಕಿನುಂಡೆ (ಇದೂ ಗಣಪನಿಗೆ ತುಂಬಾ ಪ್ರಿಯವಾದ ತಿನಿಸು) ತಯಾರಿಸಿ ಅರ್ಪಿಸುವ ವಾಡಿಕೆಯೂ ಇದೆ. ಕೆಲವು ಮನೆಗಳಲ್ಲಿ 8 ಅಥವಾ 11 ದಿನವೂ ಒಂದೊಂದು ಬಗೆಯ ತಿನಿಸನ್ನು ನೈವೇದ್ಯವಾಗಿ ಅರ್ಪಿಸಿ, ಕೊನೆಯ ದಿನ ಎಲ್ಲವನ್ನೂ ತಯಾರಿಸಿ ಅರ್ಪಿಸುವ ರೂಢಿಯಿದೆ. ಅದರಲ್ಲಿ ಸಹ ಈ ಸುಕ್ಕಿನುಂಡೆಗೇ ಮೊದಲ ಮತ್ತು ಉನ್ನತ ಸ್ಥಾನ.
-ಮೇಘನಾ ಕಾನೇಟ್ಕರ್