ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ಸೇರಿರುವ ಮಕ್ಕಳಿಗೆ ಉದ್ದೇಶಪೂರ್ವಕವಾಗಿ ಆಡಳಿತ ಮಂಡಳಿಗಳು ವರ್ಗಾವಣೆ ಪತ್ರ ನೀಡುತ್ತಿವೆ ಎಂದು ಆರೋಪಿಸಿ ಕೆಲವು ಪೋಷಕರು ಇಲಾಖೆಗೆ ದೂರು ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಂತಹ ಶಾಲೆಗಳ ಆಡಳಿತ ಮಂಡಳಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಪೋಷಕರ ಮನವಿ ಪತ್ರ ಪಡೆಯದೇ ಒತ್ತಾಯ ಪೂರ್ವಕವಾಗಿ ವರ್ಗಾವಣೆ ಪತ್ರ ನೀಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪೋಷಕರು ಯಾವುದೇ ಕೋರಿಕೆ ಪತ್ರ ನೀಡದಿದ್ದರೂ ಉದ್ದೇಶ ಪೂರ್ವಕವಾಗಿ ಮಕ್ಕಳಿಗೆ ವರ್ಗಾವಣೆ ಪತ್ರ ನೀಡಿ ಶಾಲೆಯಿಂದ ಹೊರಗೆ ಹಾಕುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ.
ಕೆಲವು ಶಾಲೆಗಳು ಹಾಗೂ ಆಡಳಿತ ಮಂಡಳಿಗೆ ನೋಟಿಸ್ ನೀಡಿದ ಬಳಿಕವೂ ಇಂತಹ ಪ್ರಕರಣಗಳು ಮುಂದುವರಿಯುತ್ತಿರುವುದು ಕಂಡು ಬಂದಿದ್ದು, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗದಂತಹ ಉಪನಿರ್ದೇಶಕರು (ಆಡಳಿತ) ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇರ ಹೊಣೆ ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ-2009ರ ಸೆಕ್ಷನ್ 5ರಂತೆ ಮಗು ಬೇರೊಂದು ಶಾಲೆಗೆ ಸೇರಿಕೊಳ್ಳಲು ವರ್ಗಾವಣೆ ಪ್ರಮಾಣ ಪತ್ರ ನೀಡಬೇಕಾಗುತ್ತದೆ.
ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ ವರ್ಗಾವಣೆ ಪತ್ರ ನೀಡಲು ವಿಳಂಬ ಮಾಡುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಜತೆಗೆ ಮಕ್ಕಳನ್ನು ಒತ್ತಾಯ ಪೂರ್ವಕವಾಗಿ ಶಾಲೆಯಿಂದ ಹೊರಹಾಕುವುದು ಕಾಯ್ದೆಯ ಉಲ್ಲಂಘನೆಯಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.