ಗಂಗಾವತಿ: ತಾಲೂಕಿನಾದ್ಯಂತ ಸ್ತ್ರೀಶಕ್ತಿ ಮಹಿಳಾ ಗುಂಪಿನ ಸದಸ್ಯೆಯರಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೆಲ ನೌಕರರು ಹಾಗೂ ಸಿಬ್ಬಂದಿ ವರ್ಗದವರು ವಿನಾ ಕಾರಣ ನೋಟಿಸ್ ನೀಡಿ ಕಿರುಕುಳ ನೀಡುತ್ತಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಕರವೇ ನೇತೃತ್ವದಲ್ಲಿ ಸ್ತ್ರೀಶಕ್ತಿ ಮಹಿಳಾ ಗುಂಪಿನ ಸದಸ್ಯರು ಡಿವೈಎಸ್‌ಪಿಯವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿಯವರು ಕಾನೂನು ಬಾಹಿರವಾಗಿ ಒಂದೇ ದಿನದಲ್ಲಿ ಸುಮಾರು 30-40 ಖಾತೆಗಳನ್ನು ಮಾಡಿ ಜಂಟಿ ಬಾಧ್ಯತ (ಜೆ.ಎಲ್.ಜಿ) ಯೋಜನೆಯಡಿ ಕೋವಿಡ್ ಸಮಯದಲ್ಲಿ ಗ್ರಾಹಕರಿಗೆ 200-215 ಗುಂಪುಗಳಿಗೆ ಸಾಲವನ್ನು ಈಗ ಏಕಾ ಏಕಿ ನೋಟಿಸ್ ನೀಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದರು.
ಬ್ಯಾಂಕಿನಲ್ಲಿ ಕೇವಲ 5 ಸಾವಿರ ರೂ.ಸಾಲ ನೀಡಿ ಈಗ ಅದಕ್ಕೆ 50 ಸಾವಿರದಿಂದ 3 ಲಕ್ಷ ರೂ.ರವರೆಗೆ ಹಣ ಕಟ್ಟುವಂತೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ. ಬ್ಯಾಂಕ್ ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಟ್ಟು 1100 ಗ್ರಾಹಕರಿಗೆ ಬ್ಯಾಂಕಿನವರು ನೋಟಿಸ್ ನೀಡಿ ಬೆದರಿಸುತ್ತಿದ್ದಾರೆ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ವಿತರಿಸಿದ ಮಹಿಳಾ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು. ಪ್ರಸಕ್ತ ಸರಕಾರ ಬರಗಾಲ ಹಿನ್ನೆಲೆಯಲ್ಲಿ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಿದ್ದು ಕೆಲ ರಾಷ್ಟ್ರೀಕೃತ
ಬ್ಯಾಂಕುಗಳು ರೈತರ ಹಳೆಯ ಸಾಲಕ್ಕೆ ಸರಕಾರದ ಬರ ಪರಿಹಾರ ಜಮಾ ಮಾಡಿಕೊಳ್ಳುತ್ತಿರುವ ಕುರಿತು ರೈತರು ಸಂಘಟನೆಗಳಿಗೆ ಮಾಹಿತಿ ನೀಡಿದ್ದು, ಜಿಲ್ಲಾ ಲೀಡ್ ಬ್ಯಾಂಕ್ ಅಧಿಕಾರಿಗಳು ಬರ ಪರಿಹಾರದ ಹಣವನ್ನು ಸಾಲದ ಖಾತೆಗೆ ಜಮಾ ಮಾಡಲು ಬಿಡಬಾರದು ಹಾಗೇನಾದರೂ ಮಾಡಿದಲ್ಲಿ ಕರವೇ ಕಾರ್ಯಕರ್ತರು ರೈತರ ಜತೆಗೂಡಿ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ. ರಾಜ್ಯ ಸರಕಾರ ಬ್ಯಾಂಕುಗಳಿಗೆ ಸೂಕ್ತ ಸುತ್ತೋಲೆ ಮೂಲಕ ಎಚ್ಚರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರವೇ ಮಹಿಳಾ ಘಟಕದ ಭಾರತಿ ಅಗಲೂರು, ಇತರೆ ಪದಾಧಿಕಾರಿಗಳಿದ್ದರು.