ಹರಪನಹಳ್ಳಿ: ಅಂಗವೈಕಲ್ಯ ಹೊಂದಿದ ಮಾತ್ರಕ್ಕೆ ಯಾರೂ ಧೃತಿಗೆಡಬಾರದು. ಮುನ್ನುಗ್ಗಿ ಕೆಲಸ ಮಾಡುವ ಛಲ ಬೆಳೆಸಿಕೊಳ್ಳಬೇಕು. ಸಮಾಜದಲ್ಲಿ ಅಂಗವಿಕಲರನ್ನು ಅನುಕಂಪದಿಂದ ನೋಡುವ ಬದಲು ಎಲ್ಲರಿಗೂ ಸಮಾನ ಅವಕಾಶ ಕೊಡಿ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಇದ್ದೆ ಇರುತ್ತದೆ. ಅದನ್ನು ಹೊರ ತರಲು ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಜಿಪಂ ಸದಸ್ಯೆ ಸುವರ್ಣಾ ಆರುಂಡಿ ನಾಗರಾಜ್ ಎಂದು ಹೇಳಿದರು.
ಪಟ್ಟಣದ ಸಾಮರ್ಥ್ಯಸೌಧ ಆವರಣದಲ್ಲಿ ರಾಜ್ಯ ವಿಕಲಚೇತನರ ಎಂ.ಆರ್.ಡಬ್ಲೂ ಮತ್ತು ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕರು ಅಂಗವಿಕಲರನ್ನು ಗೌರವಿಸಲು ಮುಂದಾಗ ಬೇಕು. ಸಾಮಾನ್ಯರಂತೆ ಬಾಳಿ ಬದುಕಲು ಅಂಗವಿಕರ ಕಷ್ಟಗಳಿಗೆ ಪ್ರತಿಯೊಬ್ಬರೂ ನೆರವಾಗಬೇಕು. ಅಂಗವಿಕರನ್ನು ಹೀಯಾಳಿಸುವ ಮನೋಭಾವ ಬಿಡಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಎಲ್ಲರೂ ಕೈಜೋಡಿಸಿ ಸ್ವಸ್ಥ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ ಎಂದರು.
ತಾಪಂ ಸದಸ್ಯ ಓ. ರಾಮಪ್ಪ ಮಾತನಾಡಿ, ಸರ್ಕಾರ ಅಂಗವಿಕರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸ್ವಾವಲಂಬಿ ಜೀವನ ನಡೆಸಲು ಸ್ವಯಂ ಉದ್ಯೋಗ ಕಲ್ಪಿಸಬೇಕು. ಅಂಗವಿಕಲರಲ್ಲೂ ಪ್ರತಿಭಾವಂತರಿದ್ದಾರೆ. ಆದರೆ ಅವರ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಬೇಕಿದೆ. ವಿಕಲಚೇತರನ್ನು ನೋಡಿ ಅನುಕಂಪ ತೋರಿಸುವ ಬದಲು ಸೂಕ್ತ ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್.ಅನಂತರಾಜು ಮಾತನಾಡಿ, ಶೇ. 5ರ ಅನುದಾನವನ್ನು ಕಡ್ಡಾಯವಾಗಿ ಎಲ್ಲ ಗ್ರಾಮ ಪಂಚಾಯಿತಿಯಲ್ಲಿ ಖರ್ಚು ಮಾಡಬೇಕು ಎಂದು ಎಲ್ಲ ಪಿಡಿಒಗಳಿಗೆ ಸೂಚನೆ ನೀಡಿದ್ದೇನೆ. ಸಮಾಜದಲ್ಲಿ ಸಮಾನ ನಾಗರಿಕ ಹಕ್ಕುಗಳನ್ನು ವಿಕಲಚೇತನರಿಗೂ ನೀಡಿದಾಗ ಮಾತ್ರ ಸಮನ್ವಯತೆ ಹಾಗೂ ಸಹಬಾಳ್ವೆ ಕಾಣಬಹುದಾಗಿದೆ. ವಿಕಲಚೇತನರು ಯಾವುದೇ ಸಂದರ್ಭದಲ್ಲೂ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಜೀವನದಲ್ಲಿ ಸಾಧನೆಯ ಪಥದತ್ತ ಸಾಗಬೇಕು ಎಂದರು.
ಶಿಶು ಅಭಿವೃದ್ಧಿ ಯೋಜಾನಾಧಿಕಾರಿ ಆರ್. ಮಂಜುನಾಥ ಮಾತನಾಡಿ, ತಾಲೂಕಿನಲ್ಲಿ ಒಟ್ಟು 4867 ವಿಕಲಚೇತನರಿದ್ದು, ಮಾಶಾಸನ, ಸರ್ಕಾರದ ವಿವಿಧ ಸೌಲಭ್ಯಗಳು ಒದಗಿಸಲಾಗುತ್ತದೆ. ಕ್ಷೇತ್ರದ ಶಾಸಕರಾದ ಜಿ. ಕರುಣಾಕರರೆಡ್ಡಿ ವಿಕಲಚೇತನರಿಗೆ 9.20
ಲಕ್ಷರೂ. ಅನುದಾನವನ್ನು ಮೀಸಲಿರಿಸಿದ್ದು, ಸೌಲಭ್ಯ ವಿತರಿಸಲು ಯೋಜನೆ ತಯಾರಿಸಲಾಗಿದೆ ಎಂದು ತಿಳಿಸಿದರು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ವಿಕಲಚೇತನ
ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ನವ ದಂಪತಿಗೆ, ನೂತನವಾಗಿ ಆಯ್ಕೆಯಾದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ತಾಪಂ ಸದಸ್ಯ ನಾಗರಾಜ್, ನವ ಜ್ಯೋತಿ ಸಾಂಸ್ಕೃತಿ ಸೇವಾ ಸಂಸ್ಥೆ ಅಧ್ಯಕ್ಷೆ ಸ್ವಪ್ನ ಮಲ್ಲಿಕಾರ್ಜುನ್, ಸಂಘದ ಜಿಲ್ಲಾಧ್ಯಕ್ಷ ಡಿ. ನೇಮ್ಯನಾಯ್ಕ, ಎಂ.ಆರ್.ಡಬ್ಲೂ ಆರ್. ಧನರಾಜ್, ಎಲ್ಲ ಗ್ರಾಮ ಪಂಚಾಯಿತಿ ವಿ.ಆರ್.ಡಬ್ಲೂ, ಯು.ಆರ್. ಡಬ್ಲೂ, ಬಾಗಳಿ ಷಡಾಕ್ಷರಪ್ಪ ಇತರರು ಉಪಸ್ಥಿತರಿದ್ದರು.