ಹರಪನಹಳ್ಳಿ: ವೈಜ್ಞಾನಿಕ ಯುಗದಲ್ಲಿ ಮನುಷ್ಯ ಗಗನದಲ್ಲಿ ಹಕ್ಕಿಯಂತೆ ಹಾರುವುದನ್ನು ಕಲಿತ, ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತ. ಆದರೆ, ಭೂಮಿಯ ಮೇಲೆ ಮನುಷ್ಯನಂತೆ ಬದುಕಲು ಕಲಿಯದ ಕಾರಣ ಅನೇಕ ಸಮಸ್ಯೆಗಳು ಕಾಡುತ್ತಿವೆ ಎಂದು ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲ ಸಂಘ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ದೇಶದಲ್ಲಿ ಮಹಿಳೆಯರಿಗೆ ನಮ್ಮ ದೇಶದಲ್ಲಿರುವಷ್ಟು ಹಕ್ಕುಗಳು ಮತ್ತು ಕಾನೂನುಗಳಿಲ್ಲ. ನಾವು ಪುರಾತನ ಕಾಲದಿಂದಲೂ ಮಹಿಳೆಯನ್ನು ಪೂಜಿಸುತ್ತ ಬಂದಿದ್ದೇವೆ. ಅಮೆರಿಕಾದಲ್ಲಿ ಮಹಿಳೆಯರಿಗೆ ಸಮಾನ ಹಕ್ಕಿದೆ. ಆದರೆ, ಹೆಚ್ಚು ಕಾನೂನುಗಳಿಲ್ಲ. ಮಹಿಳೆಯರಿಗಾಗಿ ಸಾಕಷ್ಟು ಕಾನೂನು ತಂದಿದ್ದಾರೆ. ಸುಪ್ರಿಂಕೋರ್ಟ್ ಇತ್ತೀಚೆಗೆ ಐತಿಹಾಸಿಕ ತೀರ್ಪು ನೀಡಿದ್ದು, ಲಿಂಗ ತಾರತಮ್ಯ ಸೇರಿದಂತೆ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದರು.
ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತೀ ಮುಖ್ಯವಾಗಿದೆ. ಸೈನ್ಯಕ್ಕೆ ಸೇರಿ ನಮ್ಮ ದೇಶದ ಗಡಿಗಳನ್ನು ಕಾಯುತ್ತಿದ್ದಾರೆ. ಪೈಲಟ್‌ಗಳಾಗಿ ವಿಮಾನವನ್ನು ಸಹ ಚಲಾಯಿಸುವ ಮಟ್ಟಕ್ಕೆ ಮಹಿಳೆಯರು ಮುಂದುವರಿದಿದ್ದಾರೆ. ಸಮಾಜದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಹೇಳಿದರು.
ಸಿವಿಲ್ ನ್ಯಾಯಾ ಧೀಶ ಬಿ.ಜಿ. ಶೋಭಾ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿದೆ. ಇಂದಿಗೂ ಮಹಿಳಾ ದಿನಾಚರಣೆ ಮಾಡುತ್ತಾ ಬಂದಿದ್ದೇವೆ. ಯಾತಕ್ಕೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಳ್ಳಬೇಕು. ಮಹಿಳೆಯರಿಗಾಗಿ ವಿಶೇಷ ಕಾನೂನು ಸರ್ಕಾರ ಜಾರಿಗೆ ತಂದಿದೆ. ಡಾ| ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮಹಿಳೆಯರಿಗೆ ಹಲವು ಕಾನೂನು ರೂಪಿಸಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಚಂದ್ರೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕಿ ಟಿ.ಎಸ್.ಗೋಪಿಕಾ, ಎಡಿಬಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಕ್ಕಿ ಶಿವಕುಮಾರ್, ಪಿಯುಸಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಮೋಹನರೆಡ್ಡಿ, ಚಿದಾನಂದಪ್ಪ, ಪುಷ್ಪ ದಿವಾಕರ್, ಅಪರ ಸರ್ಕಾರಿ ವಕೀಲ ಕಣವಿಹಳ್ಳಿ ಮಂಜುನಾಥ್, ವಕೀಲ ಪಿ.ಜಗದೀಶಗೌಡ, ಕಾಲೇಜಿನ ಪ್ರಾಚಾರ್ಯ ಡಾ| ಮಲ್ಲಿಕಾರ್ಜುನಗೌಡ, ಉತ್ತಂಗಿ ಸಂಗೀತ ಮಾತನಾಡಿದರು.
ವಕೀಲರಾದ ಗಂಗಾಧರ್ ಗುರುಮಠ್ ಮತ್ತಿಹಳ್ಳಿ ಅಜ್ಜಪ್ಪ, ಕೆ.ಪ್ರಕಾಶ್, ಎಂ.ಮೃತಂಜಯ್ಯ, ಸೀಮಾ, ರೇಣುಕಾ ಮೇಟಿ, ಬಾಗಳಿ ಮಂಜುನಾಥ್, ಹನುಮಂತಪ್ಪ, ವಿ.ಜಿ.ಪ್ರಕಾಶ್ ಗೌಡ, ನಂದೀಶನಾಯ್ಕ, ಸಣ್ಣ ಲಿಂಗನಗೌಡ, ಸಿದ್ದಲಿಂಗನಗೌಡ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.