ಹರಪನಹಳ್ಳಿ: ದಾವಣಗೆರೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ ಸಂಖ್ಯೆ ಹೆಚ್ಚಾಳವಾದ ಹಿನ್ನೆಲೆ ಯಲ್ಲಿ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊಸ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ. ಅಲ್ಲದೇ ಪಟ್ಟಣ ದಲ್ಲಿಯೂ ಬಹುತೇಕ ವಾರ್ಡ್‌ಗಳಲ್ಲಿ ಬೇರೆ ಯಾರು ಬಾರದಂತೆ ಮುಳ್ಳಿನ ಬೇಲಿ ಹಾಕಿದ್ದಾರೆ. ದಾವಣಗೆರೆ ಸೀಲ್‌ಡೌನ್ ಪ್ರದೇಶದಿಂದ ವ್ಯಕ್ತಿಯೊಬ್ಬ ಹರಪನಹಳ್ಳಿ ಪಟ್ಟಣದ ಮಗಳ ಮನೆಗೆ ಏ.29ರಂದು ಬಂದಿದ್ದರು.
ಅವರನ್ನು ಅಧಿಕಾರಿಗಳು ಗುರುವಾರ ವಾಪಸ್ ದಾವಣಗೆರೆಗೆ ಕಳುಹಿಸಿದ್ದಾರೆ. ಅವರು ದಾವಣಗೆರೆಯಿಂದ ಬೈಕ್ ಮೂಲಕ ಬಂದಿದ್ದ ರಾಗಿಮಸಲವಾಡ ಮತ್ತು ಶಿಂಗ್ರಿಹಳ್ಳಿ ಒಳಮಾರ್ಗದ ರಸ್ತೆಗೆ ಟ್ರಂಚ್ ಅಗೆದು, ಮುಳ್ಳಿನ ಬೇಲಿ ಹಾಕಲಾಗಿದೆ. ತಾಲೂಕಿನ ಕುಂಚೂರು ಗ್ರಾಮದ ವ್ಯಕ್ತಿಯೊಬ್ಬ ದಾವಣಗೆರೆಗೆ ಕೂಲಿ ಕೆಲಸಕ್ಕೆಂದು ತೆರಳಿ ಏ.29ರಂದು ಗ್ರಾಮಕ್ಕೆ ಮರಳಿದ್ದರು. ಏ.30ರಂದು ಅವರನ್ನು ಪರೀಕ್ಷೆಗೆ ಒಳಪಡಿಸಿದ್ದು, ಕೊರೊನಾ ಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಇನಾಯತವುಲ್ಲಾ ತಿಳಿಸಿದ್ದಾರೆ.
ಮೂರು ಹೊಸ ಚೆಕ್‌ಪೋಸ್ಟ್: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಹರಪನಹಳ್ಳಿ ಗಡಿ ಭಾಗಗಳಲ್ಲಿ ಮೂರು ಹೊಸ ಚೆಕ್‌ಪೋಸ್ಟ್ ಗಳನ್ನು ತೆರೆದು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಹರಪನಹಳ್ಳಿ ಠಾಣೆ ವ್ಯಾಪ್ತಿಯ ಹರಪನಹಳ್ಳಿ-ಅರಸೀಕೆರೆ ಮಾರ್ಗದ ಮಧ್ಯೆ ದೇವರ ತಿಮ್ಮಲಾಪುರ, ಹರಪನಹಳ್ಳಿಯಿಂದ ಕಂಚಿಕೇರಿ-ಬೆಂಡಿಗೇರಿ ಮಾರ್ಗದ ರೈಲ್ವೆ ಬಿಡ್ಜ್ ಹತ್ತಿರ, ಹರಪನಹಳ್ಳಿ-ಹರಿಹರ ರಸ್ತೆಯ ಆಶ್ರಯ ಕ್ಯಾಂಪ್ ಬಳಿ ಹೊಸ ಚೆಕ್‌ಪೋಸ್ಟ್ ತೆಗೆಯಲಾಗಿದೆ.
ಹೊಸ ಚೆಕ್‌ಪೋಸ್ಟ್‌ಗಳು ಸೇರಿ ಒಟ್ಟು 9 ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ತೀವ್ರ ತಪಾಸಣೆಗೆ ಒಳಪಡಿಸುತ್ತಿದ್ದಾರೆ. ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಒಳ ಮಾರ್ಗಗಳನ್ನು ಸಹ ಬಂದ್ ಮಾಡಲಾಗಿದೆ. ಸದ್ಯ ಹರಪನಹಳ್ಳಿಯಿಂದ ದಾವಣಗೆರೆಗೆ ಯಾರು ಹೋಗುವಂತಿಲ್ಲ, ಬರುವಂತಿಲ್ಲ, ಕೇವಲ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಲುವಾಗಲು ಠಾಣೆ ವ್ಯಾಪ್ತಿಯ ಹರಪನಹಳ್ಳಿ ರಾಗಿಮಸಲವಾಡ, ಶಿಂಗ್ರಿಹಳ್ಳಿ ಮಾರ್ಗದ ರಸ್ತೆಗೆ ಟ್ರಂಚ್ ಅಗೆದು ಮುಳ್ಳಿನ ಬೇಲಿ ಹಾಕಲಾಗಿದೆ.
ದಾವಣಗೆರೆ-ಹರಪನಹಳ್ಳಿ ಮಧ್ಯೆ ಓಡಾಟ ಮಾಡುವವರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ದಾವಣಗೆರೆ ಸೀಲ್ ಡೌನ್ ಪ್ರದೇಶದಿಂದ ವ್ಯಕ್ತಿಯೊಬ್ಬ ಪಟ್ಟಣಕ್ಕೆ ಬಂದು ಹೋಗಿರುವುದರಿಂದ ಜನರು ಭಯಭೀತರಾಗಿ ಪಟ್ಟಣದ ಮ್ಯಾಸಗೇರಿ ಮತ್ತು ಬಣಗಾರಗೇರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮತ್ತು ಶಂಕರ ಮಠದ ಬಳಿ, ಚಿತ್ತಾರಗೇರಿ ಸೇರಿದಂತೆ ನಾಲ್ಕೈದು ಕಡೆ ಮುಳ್ಳಿನ ಬೇಲಿ ಹಾಕಲಾಗಿದೆ.