Advertisement
ಹರಪನಹಳ್ಳಿ ಪಟ್ಟಣದ ಬಿಎಸ್‌ಎನ್‌ಎಲ್ ಕಚೇರಿ ಹಿಂಭಾಗದಲ್ಲಿರುವ ಗ್ರಂಥಾಲಯ ಜ್ಞಾನ ದೇಗುಲದ ಬದಲು ಭೂತ ಬಂಗಲೆಯಂತೆ ಕಾಣುತ್ತಿದೆ. ಕಳೆದ 20 ವರ್ಷಗಳ ಹಿಂದೆ ಖರೀದಿಸಿರುವ ಕುರ್ಚಿಗಳೆಲ್ಲ ಹಾಳಾಗಿವೆ. ಕಿಟಕಿ ಗಾಜು ಒಡೆದಿರುವುದರಿಂದ ಮಳೆ ಬಂದರೆ ಸಾಕು ನೀರು ಒಳಗೆ ಬರುತ್ತದೆ. ಇದರಿಂದ ಚೇರು, ದಿನಪತ್ರಿಕೆಗಳು, ಪುಸ್ತಕಗಳೆಲ್ಲಾ ಒದ್ದೆಯಾಗುತ್ತಿವೆ.
Related Articles
Advertisement
ಶೌಚಾಲಯ ಮರೀಚಿಕೆ: ಹೆಸರಿಗಷ್ಟೇ ತಾಲೂಕುಮಟ್ಟದ ಗ್ರಂಥಾಲಯ, ಆದರೆ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿವೆ. ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹೀಗಾಗಿ ಮಹಿಳೆಯರು ಗ್ರಂಥಾಲಯಕ್ಕೆ ಬರುತ್ತಿಲ್ಲ. ಕಟ್ಟಡ ಹಿಂಭಾಗದಲ್ಲೇ ಮೂತ್ರ ವಿಸರ್ಜನೆ ಮಾಡಬೇಕಿದೆ. ಇದರಿಂದ ಗ್ರಂಥಾಲಯ ಸುತ್ತಮುತ್ತ ಗಬ್ಬು ವಾಸನೆ ಪಸರಿಸಿದೆ.
ಗ್ರಂಥಾಲಯ ಸುತ್ತಮುತ್ತ ಆಳೆತ್ತರದ ಗಿಡಗಂಟೆಗಳು ಬೆಳೆದು ನಿಂತಿವೆ. ಗ್ರಂಥಾಲಯ ಹಿಂಭಾಗ ಬಯಲು ಜಾಗವಿರುವುದರಿಂದ ಕಸವನ್ನು ತಂದು ಹಾಕಲಾಗುತ್ತಿದ್ದು, ಇದರಿಂದ ದುರ್ನಾತ ಬೀರುತ್ತಿದೆ. ಗುಮಾಸ್ತರು, ಅಟೆಂಡರ್ ಕೊರತೆಯಿದ್ದು ಕೇವಲ ಶಾಖಾ ಅಧಿಕಾರಿ ಮಾತ್ರ ರ್ಯನಿರ್ವಹಿಸುತ್ತಿದ್ದಾರೆ.
ಹಂದಿಗಳ ಹಾವಳಿ: ಗ್ರಂಥಾಲಯಕ್ಕೆ ಸರಿಯಾದ ಕಾಂಪೌಂಡ್ ಮತ್ತು ಗೇಟ್ ವ್ಯವಸ್ಥೆ ಇಲ್ಲ. ಹೀಗಾಗಿ ಹಂದಿಗಳು ನೇರವಾಗಿ ಗ್ರಂಥಾಲಯದ ಆವರಣದಲ್ಲಿ ಸುತ್ತಾಡುತ್ತಿವೆ. ಕೆಲವೊಮ್ಮೆ ಹಿಂಡುಹಿಂಡಾಗಿ ಆಗಮಿಸುವ ಹಂದಿಗಳು ಗ್ರಂಥಾಲಯ ಒಳಗೂ ನುಗ್ಗುತ್ತಿವೆ. ಇದೊಂಥರ ಹಂದಿಗಳ ಗೂಡಾಗಿ ಪರಿವರ್ತನೆ ಹೊಂದುತ್ತಿದೆ. ಗ್ರಂಥಾಲಯದ ಹಳೇ ಕಟ್ಟಡಕ್ಕೆ ಅಂಟಿಕೊಂಡಂತೆ 19.50ಲಕ್ಷರೂ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಇದು ಸುಸಜ್ಜಿತವಾಗಿಲ್ಲ. ಕಟ್ಟಡ ಪೂರ್ಣಗೊಂಡು 1 ವರ್ಷ ಕಳೆದಿದ್ದರೂ ಬಿಡ್ಡಿಂಗ್ ಉದ್ಘಾಟನೆಯಾಗಿಲ್ಲ. ಚಿಕ್ಕ ಕೊಠಡಿ ಆಗಿರುವುದರಿಂದ ಅಲ್ಲಿ ಪುಸ್ತಕದ ಅಲ್ಮೇರಾ ಮತ್ತು ರ್ಯಾಕ್‌ರ್‌ಗಳನ್ನು ಇಡಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಹೊಡೆದು ಹಾಕಿದ್ದ ಕೌಂಪೌಂಡ್ ಮರು ನಿರ್ಮಾಣವಾಗಿಲ್ಲ.
ಎಲ್ಲೆಂದರಲ್ಲಿ ಕೊಚ್ಚೆ ನೀರು: ಗ್ರಂಥಾಲಯ ತೆಗ್ಗಿನ ಪ್ರದೇಶದಲ್ಲಿರುವುದರಿಂದ ಸ್ವಲ್ಪ ಪ್ರಮಾಣದ ಮಳೆ ಬಂದರೂ ಸಾಕು ಇಲ್ಲಿಗೆ ಮಳೆ ನೀರು ಬಂದು ನಿಲ್ಲುತ್ತದೆ.
ಗ್ರಂಥಾಲಯದ ಪಕ್ಕದಲ್ಲಿರುವ ದೂರದರ್ಶನ ಮರು ಪ್ರಸಾರ ಕೇಂದ್ರ ಮತ್ತು ಡಿವೈಎಸ್ಪಿ ಕಚೇರಿವರೆಗೆ ಮಾತ್ರ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದು, ಗ್ರಂಥಾಲಯಕ್ಕೆ ಈ ಭಾಗ್ಯವಿಲ್ಲ. ಹೀಗಾಗಿ ಕೊಚ್ಚೆ ನೀರಿನಲ್ಲಿಯೇ ಗ್ರಂಥಾಲಯದ ಒಳಗೆ ಪ್ರವೇಶ ಮಾಡಬೇಕು.
ಹೀಗಾಗಿ ವೃದ್ಧರು, ಅಂಗವಿಕಲರು ಹರಸಾಹಸ ಮಾಡಬೇಕು. ಕೊಚ್ಚೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಂಜೆ ವೇಳೆ ಗ್ರಂಥಾಲಯಕ್ಕೆ ಆಗಮಿಸಲು ಭಯಪಡುವಂಥ ಪರಿಸ್ಥಿತಿಯಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸಿ ಜ್ಞಾನದೇಗುಲದ ಸಮಸ್ಯೆಗೆ ಅಂತ್ಯ ಹಾಡಬೇಕಿದೆ.