ಹರಪನಹಳ್ಳಿ: ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕ್ರೀಡಾ ಹಾಸ್ಟೆಲ್ ವ್ಯವಸ್ಥೆ ಹಾಗೂ ಬ್ಯಾಡ್ಮಿಂಟನ್ ಆಟದ ಮೈದಾನ ಹಾಗೂ ಈಜುಕೊಳ ನಿರ್ಮಿಸಲು ಮುಖ್ಯಮಂತ್ರಿಯವರ ಬಳಿ ಚರ್ಚಿಸಲಾಗುವುದು ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2019-20ನೇ ಸಾಲಿನ ತಾಲೂಕುಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಸೋಲು ಮತ್ತು ಗೆಲುವನ್ನು ಸಮನಾಗಿ ಸ್ವೀಕರಿಸಬೇಕು. ಕ್ರೀಡೆಗಳಲ್ಲಿ ಪ್ರೀತಿ, ವಿಶ್ವಾಸ, ಸ್ನೇಹ ಸಂಬಂಧವಿರಬೇಕೆಯೇ ಹೊರತು ದ್ವೇಷದ ಭಾವ ಹೊಂದಿರಬಾರದು ಎಂದರು. ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ವಿಕಾಸನವಾಗುತ್ತದೆ. ತಾಲೂಕಿನ 36ಕ್ಕೂ ಹೆಚ್ಚು ದೈಹಿಕ ಶಿಕ್ಷಕರು ಶಿಸ್ತಿನ ಸಿಪಾಯಿಗಳಂತೆ ಕ್ರೀಡಾಪಟುಗಳಿಗೆ ತೀರ್ಪು ನೀಡಬೇಕು. ಗ್ರಾಮೀಣ ಪ್ರದೇಶ ಯುವಕ ಮತ್ತು ಯವತಿಯರು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತಂದಿರುವುದು ಸಂತೋಷದ ವಿಷಯ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಸೋತವರು ದೃತಿಗೆಡಬಾರದು. ನಿರಂತರ ಪ್ರಯತ್ನ ಮಾಡಬೇಕು ಎಂದರು. ತಾಪಂ ಅಧ್ಯಕ್ಷೆ ಅನ್ನರ್ಪೂಣಮ್ಮ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಜಿಪಂ ಸದಸ್ಯೆ ಸುವರ್ಣಮ್ಮ, ಆರುಂಡಿ ನಾಗರಾಜ್ ಕ್ರೀಡಾವಂದನೆ ಸ್ವೀಕರಿಸಿದರು. ಬಿಇಒ ಮಂಜುನಾಥಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಸದಸ್ಯರಾದ ರೊಕ್ಕಪ್ಪ, ಎಂ.ಕೆ. ಜಾವೀದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ದಲಿಂಗನಗೌಡ, ಸಂಘದ ಅಧ್ಯಕ್ಷ ಅಂಜಿನಪ್ಪ, ಎಂ. ಆಂಜನೇಯ, ಸಣ್ಣ ಹಾಲಪ್ಪ, ಆರ್.ಲೊಕೇಶ್, ವಕೀಲ ಪ್ರಕಾಶ್, ಬಿ. ರಾಜಶೇಖರ್, ಕೆ. ಕರಿಬಸಪ್ಪ, ಡಿ.ಎಸ್.ಲಿಂಗೇಶ್, ಜಯರಾಜ್, ಗುರುರಾಜ್, ಪಿ.ಶಂಕರ್, ಎಚ್.ಹೂವಣ್ಣ, ಬಸವರಾಜ್, ಲೋಕೇಶ್, ಎನ್.ಜೆ.ಉದಯಶಂಕರ್ ಇತರರಿದ್ದರು.