ಹರಪನಹಳ್ಳಿ: ಹೆಂಡತಿಯ ಶೀಲ ಶಂಕಿಸಿ ಗಂಡ ಮತ್ತು ಮಾವ ಸೇರಿ ಮಹಿಳೆ ಮತ್ತು ಅವಳ ಅಣ್ಣನನ್ನು ಕೊಲೆ ಮಾಡಿದ ಘಟನೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ಭಾನುವಾರ ಬೆಳಗಿನ ಜಾವ ಜರುಗಿದೆ.ಕಾವ್ಯ(28) ಹಾಗೂ ಕೊಟ್ರೇಶ(32) ಕೊಲೆಗೀಡಾದ ಅಣ್ಣ, ತಂಗಿ.
ಈ ಕುರಿತು ಹತ್ಯೆಗೀಡಾದವಳ ತಾಯಿ ಕೊಟ್ಟೂರಿನ ಜಿ.ಬಸಮ್ಮ ಎಂಬುವವರು ಚಿಗಟೇರಿ ಪೋಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಮಗಳು ಕಾವ್ಯಳನ್ನು ಸುಮಾರು 9 ವರ್ಷಗಳ ಹಿಂದೆ ಚಿಗಟೇರಿ ಗ್ರಾಮದ ನಂದೀಶನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಕಾವ್ಯಳು ತನ್ನ ತವರು ಮನೆಗೆ ಹೋಗಿ ಹೋಗಿ ಬರುವುದರಿಂದ ಹಾಗೂ ಬೇರೆಯವರೊಂದಿಗೆ ಮಾತನಾಡಿದ್ದನ್ನು ನೋಡಿ ಕಾವ್ಯಳ ಗಂಡ ನಂದೀಶ ಹಾಗೂ ಮಾವ ಜಾತಪ್ಪ ಶೀಲದ ಮೇಲೆ ಸಂಶಯ ಪಟ್ಟಿದ್ದಾರೆ.
ತಂದೆ ಜಾತಪ್ಪ ಹಾಗೂ ಮಗ ನಂದೀಶ ಇಬ್ಬರೂ ಸೇರಿ ಕಾವ್ಯಳು ತನ್ನ ಅಣ್ಣನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನದಿಂದ ಭಾನುವಾರ ಬೆಳಗಿನ ಜಾವ 2 ಗಂಟೆಯಿಂದ 5ಗಂಟೆ ಮಧ್ಯದ ಅವಧಿಯಲ್ಲಿ ಕೊಟ್ರೇಶ ಹಾಗೂ ಕಾವ್ಯಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿರುತ್ತಾರೆ.
ಚಿಗಟೇರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಮೃತಳ ಗಂಡ ನಂದೀಶ ಹಾಗೂ ಮಾವ ಜಾತಪ್ಪ ಅವರನ್ನು ಪೋಲೀಸರು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು, ಡಿವೈಎಸ್ಪಿ ಡಾ.ವೆಂಕಟಪ್ಪ ನಾಯಕ, ತನಿಖಾಧಿಕಾರಿ ನಾಗರಾಜ ಎಂ.ಕಮ್ಮಾರ ಇವರುಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಟಿ.ಜಿ.ನಾಗರಾಜ ಸಿಬ್ಬಂದಿಗಳ ವಿಶೇಷ ತಂಡವು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.
ಈ ಕಾರ್ಯಚರಣೆಯಲ್ಲಿ ಹರಪನಹಳ್ಳಿ ಪೋಲೀಸ್ ವೃತ್ತದ ಸಿಬ್ಬಂದಿಯವರಾದ ಕೊಟ್ರೇಶ, ಮುಭಾರಕ, ಲಕ್ಕಪ್ಪ, ರವಿದಾದಾಪುರ, ಮಹೇಶ, ಮಧುಕುಮಾರ ಹಾಗೂ ಇತರರು ಭಾಗಿಯಾಗಿದ್ದು, ಅಧಿಕಾರಿ ಮತ್ತು ಸಿಬಂದಿಯವರ ಕಾರ್ಯಚರಣೆಗೆ ವಿಜಯನಗರ ಎಸ್ಪಿ ಶ್ರೀಹರಿಬಾಬು ಶ್ಲಾಘಿಸಿದ್ದಾರೆ.