ಹರಪನಹಳ್ಳಿ: ಮಹಾರಾಷ್ಟ್ರ ಸೊಲ್ಲಾಪುರ ಮೂಲದ ಅಶೋಕ್ (55) ಎಂಬ ವೃದ್ಧನೊಬ್ಬ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದು, ಇದೀಗ ಸರಿಯಾದ ವಿಳಾಸ ತಿಳಿಯದ ಕಾರಣ ಆತನನ್ನು ಎಲ್ಲಿಗೆ ಕಳಿಸಬೇಕು ಎನ್ನುವ ಜಿಜ್ಞಾಸೆಯಲ್ಲಿ ಅಧಿಕಾರಿಗಳಿದ್ದಾರೆ.
ಕಳೆದ ಮಾ.30 ರಂದು ಹರಿಹರ ರಸ್ತೆಯಲ್ಲಿ ವೃದ್ಧ ನಡೆದುಕೊಂಡು ಹೋಗುತ್ತಿದ್ದ ವೇಳೆ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ಕರೆದು ತಂದು ಹೋಂ ಕ್ವಾರಂಟೈನ್‌ಗೆ ಬಿಟ್ಟಿದ್ದರು. ಇದೀಗ ಆತನ ಹೋಂ ಕ್ವಾರಂಟೈನ್ ಅವಧಿ ಮಗಿದಿದ್ದು, ಆತನನ್ನು ಎಲ್ಲಿಗೆ ಕಳಿಸಬೇಕು ಎಂಬುವುದು ಅಧಿಕಾರಿಗಳಿಗೆ ತಿಳಿಯದಂತಾಗಿದೆ.
ಬುಧವಾರ ತೆಲಂಗಾಣ ವಲಸೆ ಕಾರ್ಮಿಕರನ್ನು ಬಿಡುಗಡೆ ವೇಳೆ ಆಗಮಿಸಿದ್ದ ಶಾಸಕರ ಬಳಿ ತನ್ನನ್ನು ತಮ್ಮೂರಿಗೆ ಕಳಿಸಿ ಕೊಡುವಂತೆ ವೃದ್ಧ ವಿನಂತಿಸಿಕೊಂಡರು. ಕುರಿ ಕಾಯಲು ಕರೆದುಕೊಂಡು ಬಂದು ನನ್ನ ಬಿಟ್ಟು ಹೋಗಿದ್ದಾರೆ ಎಂದು ಹೇಳುತ್ತಾರೆ. ಮತ್ತೂಂದೆಡೆ ಡಾಬಾದಲ್ಲಿ ಕೆಲಸ ಮಾಡುತ್ತಿದ್ದೆ ಎಂದು ತಿಳಿಸುತ್ತಾರೆ. ಸರಿಯಾಗಿ ಊರಿನ ಹೆಸರು ಗೊತ್ತಿಲ್ಲ. ಕೇಳಿದ್ರೆ ಬಿಜಾಪುರ ಮತ್ತು ಸೋಲ್ಲಾಪುರ ಎನ್ನುತ್ತಾರೆ. ಆಧಾರ ಕಾರ್ಡ್, ಫೋನ್ ನಂಬರ್ ಯಾವುದೂ ಇಲ್ಲ. ಹಿಂದಿ ಮತ್ತು ಮರಾಠಿ ಭಾಷೆ ಮಾತನಾಡುತ್ತಾನೆ ಎಂದು ನಿರಾಶ್ರಿತರ ಕೇಂದ್ರದ ಅಧಿಕಾರಿಗಳು ತಿಳಿಸಿದರು.
ಈತನ ಬಗ್ಗೆ ಸರಿಯಾಗಿ ಮಾಹಿತಿ ಕಲೆ ಹಾಕಿಕೊಂಡು ಬಿಜಾಪುರ ಭಾಗಕ್ಕೆ ತೆರಳುವ ತರಕಾರಿ ವಾಹನದಲ್ಲಿ ಆತನನ್ನು ಗ್ರಾಮಕ್ಕೆ ತಲುಪಿಸುವಂತೆ ವ್ಯವಸ್ಥೆ ಮಾಡಿ ಶಾಸಕ ಜಿ.ಕುರುಣಾಕರರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು. ಆಗ ಸೋಲ್ಲಾಪುರಕ್ಕೆ ಹರಪನಹಳ್ಳಿಯಿಂದ ಸರ್ಕಾರಿ ಬಸ್ ಓಡಾಡುತ್ತದೆ. ಬಸ್‌ನಲ್ಲಿಯೇ ಈತನನ್ನು ಕಳಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಬಸ್ ಡಿಪೋ ವ್ಯವಸ್ಥಾಪಕರು ತಿಳಿಸಿದರು.