ಹರಪನಹಳ್ಳಿ: ಪಟ್ಟಣದ ಸಿನಿಮಾ ಮಂದಿರದ ರಸ್ತೆ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ರಸ್ತೆ ಬೀದಿ ಬದಿಯಲ್ಲಿ ಅಕ್ರಮವಾಗಿ ಹಣ್ಣು ಹಾಗೂ ತರಕಾರಿ, ಹೂ, ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ವ್ಯಾಪಾರಸ್ಥರು ಮತ್ತು ಫುಟಪಾತ್ ಅತಿಕ್ರಮಣ ಮಾಡಿಕೊಂಡಿರುವುದನ್ನು ಪುರಸಭೆ ಅಧಿಕಾರಿಗಳು ಗುರುವಾರ ತೆರವುಗೊಳಿಸಿದರು.
ಬೆಳಗ್ಗೆ 5.30ಕ್ಕೆ ಕಾರ್ಯಚರಣೆ ಶುರು ಮಾಡಿಕೊಂಡ ಅಧಿಕಾರಿಗಳು ಪೊಲೀಸರ ನೆರವಿನಲ್ಲಿ ಜೆಸಿಬಿ ಯಂತ್ರ ಬಳಿಸಿ ಫುಟಪಾತ್ ಅಕ್ರಮಿಸಿಕೊಂಡು ಹಾಕಿಕೊಂಡಿದ್ದ ಮೆಟ್ಟಿಲು ಹಾಗೂ ಗೋಡೆಗಳನ್ನು ನೆಲಸಮಗೊಳಿಸಿದರು. ಬೀದಿ ಬದಿಯಲ್ಲಿ ಬೀಡಾ ಅಂಗಡಿಗಳನ್ನು ಇಟ್ಟುಕೊಂಡಿದ್ದ ಮಾಲೀಕರಿಗೆ ತರೆವುಗೊಳಿಸಲು ಅಧಿಕಾರಿಗಳು ಸೂಚಿಸಿದಾಗ ಕೆಲವರು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡರು. ಈ ಸಂದರ್ಭದಲ್ಲಿ ವ್ಯಾಪಾರಸ್ಥರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.
ಸಿನಿಮಾ ಮಂದಿರ ರಸ್ತೆಯಲ್ಲಿ ಬೈಕ್ ಕೂಡ ಸಂಚರಿಸುವುದು ದುಸ್ತರವಾಗುವಂತೆ ವ್ಯಾಪಾರಸ್ಥರು ಅಂಗಡಿಗಳನ್ನು ಹಾಕಿಕೊಂಡಿದ್ದರು. ಇದರಿಂದ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸಲು ಹರಸಾಹಸ ಪಡುವಂತಾಗಿತ್ತು. ಈ ಬಗ್ಗೆ ಹಲವಾರು ಬಾರಿ ಅಧಿಕಾರಿಗಳು ಸೂಚನೆ ನೀಡಿದ್ದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗೊಂಡಿದ್ದಾರೆ. ಪ್ರತಿನಿತ್ಯ ನಾವು ಇಲ್ಲಿ ದುಡಿದುಕೊಂಡು ಹೋದರೆ ಮಾತ್ರ ನಮ್ಮ ಜೀವನ ನಡೆಯುತ್ತದೆ. ನೀವು ನಮ್ಮನ್ನು ತೆರವು ಮಾಡಿದರೆ ನಮ್ಮ ಜೀವನದ ಗತಿಯೇನು ಎಂದು ವ್ಯಾಪಾರಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದರು.
ಹಣ್ಣು ಮತ್ತು ತರಕಾರಿ ಅಂಗಡಿಗಳನ್ನು ವಾರದ ಸಂತೆ ನಡೆಯುವ ಸ್ಥಳಕ್ಕೆ ಬದಲಾಯಿಸಿಕೊಳ್ಳುವಂತೆ ಸೂಚಿಸಲಾಯಿತು. ಪುನಃ ರಸ್ತೆ ಮೇಲೆ ಅಂಗಡಿ ಇಟ್ಟುಕೊಂಡಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ವ್ಯಾಪಾರಸ್ಥರಿಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಅಂಗಡಿಗಳನ್ನು ತೆರವುಗೊಳಿಸಿದ ನಂತರ ವ್ಯಾಪಾರಸ್ಥರು ಮಿನಿವಿಧಾನಕ್ಕೆ ತೆರಳಿ ಉಪವಿಭಾಗಾಕಾರಿಗಳಿಗೆ ಮನವಿ ಸಲ್ಲಿಸಿದರು.
ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಕೆ.ವಿ. ಪ್ರಸನ್‌ಕುಮಾರ್, ಸಿಪಿಐ ಕೆ.ಕುಮಾರ್, ಪುರಸಭೆ ಮುಖ್ಯಾಧಿಕಾರಿ ನಾಗರಾಜನಾಯ್ಕ, ಪಿಎಸ್‌ಐ ಶ್ರೀಧರ್, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ನೇತೃತ್ವದ ತಂಡ ಕಾರ್ಯಚರಣೆ ನಡೆಸಿತು.