Advertisement

ಜಿಪಂ ಸಿಇಒ ಸರ್ವಾಧಿಕಾರಿ ಧೋರಣೆ: ಆಕ್ರೋಶ

05:25 PM Jan 09, 2020 | Team Udayavani |

ಹರಪನಹಳ್ಳಿ: ಕಳೆದ ಒಂದು ವರ್ಷದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ತಾಲೂಕಿನಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಿದೆ. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಾಪಂ ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಅಧ್ಯಕ್ಷೆ ಅನ್ನಪೂರ್ಣಮ್ಮ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಿಇಒ ಅವರ ನಡುವಳಿಕೆ ಕುರಿತು ಸಂಸದರು, ಶಾಸಕರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ಕಳೆದ ಅವಧಿಯಲ್ಲಿ ಕ್ರಿಯಾಯೋಜನೆ ಪ್ರಕಾರವೇ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರೂ ಕಡತಗಳನ್ನು ಪರಿಶೀಲಿಸದೇ ಬಿಲ್‌ ಪಾವತಿಸದೇ ಸತಾಯಿಸುತ್ತಿದ್ದಾರೆ ಎಂದು ದೂರಿದರು.

ತಾಲೂಕಿನಲ್ಲಿ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿ ಜನರು ಗುಳೆ ಹೋಗುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಖಾತ್ರಿ ಯೋಜನೆಯ ಯಾವುದೇ ಕ್ರಿಯಾಯೋಜನೆಗೆ ಅನುಮೋದನೆ
ನೀಡುತ್ತಿಲ್ಲ. ಹಿಂದೆ ನಡೆದಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿ ನಂತರ ನೀಡುತ್ತೇವೆ ಎನ್ನುತ್ತಿದ್ದಾರೆ. 5-6 ಬಾರಿ ಅಧಿಕಾರಿಗಳ ತಂಡ ಕಳುಹಿಸಿ ಕೆಲಸಗಳನ್ನು ಪರಿಶೀಲನೆ ಮಾಡಿದ್ದಾರೆ. ಹರಪನಹಳ್ಳಿ ಜನರು ಕಳ್ಳರು ಎಂದು ತಿಳಿದುಕೊಂಡಿದ್ದೀರಾ? ಕೂಡಲೇ ಸಿಇಒ ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕನ್ನನಾಯಕನಹಳ್ಳಿ ಮೊರಾರ್ಜಿ ಶಾಲೆ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಪ್ರಾಂಶುಪಾಲರು, ವಾರ್ಡ್‌ನ್‌ ಮತ್ತು ಶಿಕ್ಷಕರನ್ನು ಸಭೆಗೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ವಿದ್ಯಾರ್ಥಿಗೆ ಏನಾದರೂ ತೊಂದರೆ ಆಗಿದ್ದರೆ ಯಾರು ಹೊಣೆ? ಪ್ರಕರಣಕ್ಕೆ ಸಂಬಂಧಿ ಸಿದಂತೆ ಏನು ಕ್ರಮಕೈಗೊಂಡಿದ್ದೀರಿ ಎಂದು ಅಧ್ಯಕ್ಷೆ ಅನ್ನಪೂರ್ಣಮ್ಮ ಪ್ರಶ್ನಿಸಿದರು.

ವಿದ್ಯಾರ್ಥಿ ಮಾನಸಿಕವಾಗಿ ಜರ್ಜರಿತನಾಗಿದ್ದು, ಇಂಥ ಕೃತ್ಯಕ್ಕೆ ಕೈಹಾಕಿದ್ದಾನೆ, ಆತನಿಗೆ ವೈದ್ಯರ ಬಳಿ ಅಪ್ತಸಮಾಲೋಚನೆ ಮಾಡಿಸಲಾಗಿದೆ ಎಂದು ಪ್ರಾಂಶುಪಾಲರು ಹೇಳಿದಾಗ ಕಾಯಂ ಪ್ರಾಂಶುಪಾಲರು, ವಾರ್ಡ್‌ನ್‌ ಇಲ್ಲದಿರುವುದು ಸಮಸ್ಯೆಯ ಮೂಲ ಕಾರಣವಾಗಿದೆ. ಇನ್ನೊಮ್ಮೆ ಇಂಥ ಘಟನೆ ಮರುಕಳಿದಂತೆ ಎಚ್ಚರವಹಿಸಿ ಎಂದು ಉಪಾಧ್ಯಕ್ಷ ಸಲಹೆ ನೀಡಿದರು.

Advertisement

ರೈತರು ತಾಲೂಕಿನ ವಿವಿಧೆಡೆ ರಸ್ತೆಯಲ್ಲಿಯೇ ಜೋಳ, ತೋಗರಿ, ರಾಗಿ ಒಕ್ಕಣಿಕೆ ಮಾಡುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಅಂಥವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಅಧ್ಯಕ್ಷೆ ಅನ್ನಪೂರ್ಣಮ್ಮ ಹೇಳಿದಾಗ ಗ್ರಾಪಂ ವತಿಯಿಂದ ಜಾಗ ಖರೀದಿಸಿ ರೈತರಿಗೆ ಒಕ್ಕಲುತನಕ್ಕೆ ಕಣ ನಿರ್ಮಾಣ ಮಾಡಿಕೊಡಲು ಅವಕಾಶವಿದ್ದರೆ ಕಲ್ಪಿಸಿಕೊಡಿ ಉಪಾಧ್ಯಕ್ಷ ಎಲ್‌. ಮಂಜ್ಯನಾಯ್ಕ ಅವರು ಇಒ ಅನಂತರಾಜು ಅವರಿಗೆ ತಿಳಿಸಿದಾಗ ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮಕೈಗೊಳ್ಳುವುದಾಗಿ ಇಒ ತಿಳಿಸಿದರು.

ಕೃಷಿ ಇಲಾಖೆ ವತಿಯಿಂದ ರೈತರಿಗೆ ನೀಡುತ್ತಿರುವ ತಾಡಪಾಲು ಮತ್ತು ಸ್ಪಿಂಕ್ಲರ್‌ಗೆ ಹೆಚ್ಚಿನ ಬೇಡಿಕೆಯಿದೆ. ಅವುಗಳನ್ನು ತರಿಸುವ ವ್ಯವಸ್ಥೆ ಮಾಡಿ ಎಂದು ಕೃಷಿ ಅಧಿಕಾರಿಗೆ ಎಲ್‌. ಮಂಜ್ಯನಾಯ್ಕ ಸೂಚಿಸಿದಾಗ ಅನುದಾನ ಸಂಪೂರ್ಣ ಖರ್ಚಾಗಿದೆ ಬರುವುದಿಲ್ಲ ಎಂದು ಅಧಿಕಾರಿ ಉತ್ತರಿಸಿದರು. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ ತರಿಸಿಕೊಡಿ ಎಂದು ಉಪಾಧ್ಯಕ್ಷರು ಸಲಹೆ ನೀಡಿದರು. ಪ್ರಗತಿಪರಿಶೀಲನಾ ಸಭೆಗೆ ತಾಲೂಕುಮಟ್ಟದ ಅಧಿಕಾರಿಗಳು ಹಾಜರಾಗದೇ ಸಿಬ್ಬಂದಿ ಕಳುಹಿಸಿದ್ದಾರೆ. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ನೀಡುವಂತೆ ಅಧ್ಯಕ್ಷೆ ಅನ್ನಪೂರ್ಣಮ್ಮ ಇಒಗೆ ಸೂಚನೆ ನೀಡಿದರು.  ಇಒ ಅನಂತರಾಜ್‌, ಯೋಜನಾಧಿಕಾರಿ ವಿಜಯಕುಮಾರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next