ಹರಪನಹಳ್ಳಿ: ಮಹಾರಾಷ್ಟ್ರ ಮತ್ತು ಗೋವಾದಿಂದ ಬಂದ ತಾಲೂಕಿನ 7 ಜನರನ್ನು ತಕ್ಷಣ ಹೊಸಪೇಟೆ ಕ್ವಾರಂಟೈನ್‌ಗೆ ವರ್ಗಾಯಿಸುವಂತೆ ಶಾಸಕ ಜಿ.ಕರುಣಾಕರರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಿರಾಶ್ರಿತ ಕೇಂದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಕೇಸ್ ಇರುವುದರಿಂದ ನಿರಾಶ್ರಿತರ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಪಟ್ಟಣದ ಸೇರಿದಂತೆ ತಾಲೂಕಿನಾದ್ಯಾಂತ ವರ್ತಕರು ಬೀಜ-ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದೂರು ಕೇಳಿ ಬರುತ್ತಿದ್ದು, ಕೃಷಿ ಅಧಿಕಾರಿಗಳ ಜೊತೆಗೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಮಳಿಗೆಗಳ ಮಾಲೀಕರ ಅಂಗಡಿ ಲೈಸನ್ಸ್ ರದ್ದುಪಡಿಸುವಂತೆ ಉಪ ವಿಭಾಗಾಧಿಕಾರಿ ವಿ.ಕೆ.ಪ್ರಸನ್ನಕುಮಾರ್ ಗೆ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಮುಖ್ಯ ವೈದ್ಯಾಧಿಕಾರಿಗಳು ಸರಿಯಾಗಿ ಮೇಲುಸ್ತುವಾರಿ ಮಾಡುತ್ತಿಲ್ಲ. ಜನರಿಗೆ ಬೇಕಾದ ಚಿಕಿತ್ಸೆ ಕೊಡುತಿಲ್ಲ ಎಂಬ ದೂರಿದೆ. ಇಸಿಜಿ ಕೆಟ್ಟು ಹೋಗಿ 15 ದಿನ ಕಳೆದರೂ ರಿಪೇರಿ ಮಾಡಿಸಿಲ್ಲ ಯಾಕೆ ಎಂದು ಶಾಸಕರು ಕೇಳಿದರು. ಸಬೂಬು ಹೇಳದೆ ಇಸಿಜಿ ಯಂತ್ರ ರಿಪೇರಿ ಮಾಡಿಸಬೇಕು. ಹೊಸ ಯಂತ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅಗತ್ಯ ಔಷಧ ದಾಸ್ತಾನು ಮಾಡುವಂತೆ ಎಂದು ತಾಕೀತು ಮಾಡಿದರು.
ವಾಲ್ಮೀಕಿ ನಗರದ ಶುದ್ಧ ಕುಡಿಯುವ ನೀರಿನ ಘಟಕದ ಯಂತ್ರ ಕಳವು ಮಾಡಲಾಗಿದೆ. ಅದರ ಪತ್ತೆಗೆ ದೂರು ದಾಖಲಿಸುವಂತೆ ಮುಖ್ಯಾಧಿಕಾರಿ ಬಿ.ಆರ್.ನಾಗರಾಜ ನಾಯ್ಕಗೆ ಸೂಚಿಸಿದ ಶಾಸಕರು ಪಟ್ಟಣದಲ್ಲಿ ಫಾಗಿಂಗ್ ಮಾಡಿಸಬೇಕು, ಹಾಗೆಯೇ ಚರಂಡಿಗಳನ್ನು ಸ್ವತ್ಛವಾಗಿಟ್ಟುಕೊಳ್ಳುವಂತೆ ಹೇಳಿದರು. ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್, ತಹಶೀಲ್ದಾರ್ ಡಾ| ನಾಗವೇಣಿ, ಡಿವೈಎಸ್ಪಿ ಮಲ್ಲೇಶ್
ದೊಡ್ಡಮನಿ, ತಾಲೂಕು ವೈದ್ಯಾಧಿಕಾರಿ ಡಾ| ಇನಾಯತ್‌ವುಲ್ಲಾ ಇತರರು ಉಪಸ್ಥಿತರಿದ್ದರು.