Advertisement

ಬೆದರಿಕೆಯಿಂದ ಜನರ ಪ್ರೀತಿ ಗೆಲ್ಲಲು ಆಗಲ್ಲ

03:28 PM Jun 09, 2019 | Team Udayavani |

ಹರಪನಹಳ್ಳಿ: ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಮೂಲಕ ಜನರ ಪ್ರೀತಿ ಗೆಲ್ಲಬೇಕೆಯೇ ಹೊರತು ಹೆದರಿಕೆ, ಬೆದರಿಕೆಯಿಂದ ಸಾಧ್ಯವಿಲ್ಲ ಎಂದು ಶಾಸಕ ಜಿ.ಕರುಣಾಕರರೆಡ್ಡಿ ತಿಳಿಸಿದರು.

Advertisement

ಪಟ್ಟಣದ ಗಾಜೀಕೇರಿಯಲ್ಲಿ ಶನಿವಾರ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರೊಕ್ಕಪ್ಪ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನರನ್ನು ಪ್ರೀತಿಯಿಂದ ಗೆಲ್ಲಬೇಕು ಎಂಬುವುದಕ್ಕೆ ಪಟ್ಟಣದ ಪುರಸಭೆಯ 27ನೇ ವಾರ್ಡ್‌ ಸಾಕ್ಷಿಯಾಗಿದೆ. ಇಲ್ಲಿಯ ಮತದಾರರು ಯಾರಿಗೂ ಅಂಜದೆ ಪ್ರಾಮಾಣಿಕತೆಯಿಂದ ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿದ್ದೀರಿ ಎಂದರು.

ನಿಮ್ಮ ವಾರ್ಡ್‌ಗಳ ಶೌಚಾಲಯ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಲಾಗುವುದು. ಶಾದಿಮಹಲ್ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಲಾಗುವುದು. ಇಲ್ಲಿಯ ಪುರಾತನ ಕಾಲದ ಬಾವಿ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯ 70 ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಕಾರ್ಮಿಕ ಇಲಾಖೆಯಿಂದ ಕೊಡಪಾನ ಮಾಡುವ ಕೆಲಸಗಾರರಿಗೆ ಗುರುತಿನ ಪತ್ರ ವಿತರಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

ಸಮಾರಂಭಕ್ಕೂ ಮೊದಲು ಪಟ್ಟಣದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಪುರಸಭೆ ಚುನಾವಣೆಯಲ್ಲಿ ಐವರು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಎರಡು ಕಡೆ ಗೆಲುವು ಸಾಧಿಸಿದ್ದಾರೆ. ಪಕ್ಷಕ್ಕೆ ನಿಷ್ಠೆ ತೋರದವರಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಿದ್ದಾರೆ. ಗೆಲುವು ಪಡೆದ ಪಕ್ಷೇತರು ಅಭ್ಯರ್ಥಿಗಳು ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ. ಪುರಸಭೆ ಅಧ್ಯಕ್ಷ ಸ್ಥಾನ ಮೀಸಲಾತಿ ನ್ಯಾಯಾಲಯದಲ್ಲಿರುವುದರಿಂದ ಮೀಸಲಾತಿ ಪ್ರಕಟವಾದ ನಂತರ ಅಧ್ಯಕ್ಷ ಸ್ಥಾನದ ಬಗ್ಗೆ ಆಲೋಚಿಸುತ್ತೇವೆ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಬಂದು ಪ್ರಚಾರ ಮಾಡಬಹುದು. ಆದರೆ ಮುಜರಾಯಿ ಸಚಿವರು ನಾನು ಹೇಳಿರೋದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಸಚಿವರು ಮನೆಗಳನ್ನು ನಿರ್ಮಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಆಯಾ ಕ್ಷೇತ್ರದ ವಸತಿ ಸಮಿತಿಗೆ ಶಾಸಕರೇ ಅಧ್ಯಕ್ಷರಾಗಿರುತ್ತಾರೆ. ಹೀಗಾಗಿ ಅದನ್ನು ನಾವು ಮಾಡಲು ಸಾಧ್ಯವಿದೆಯೇ ಹೊರತು ಅವರು ಮಾಡಲು ಬರಲ್ಲ ಎಂದು ಹೇಳಿಕೆ ನೀಡಿದ್ದೇನೆ. ಸಚಿವರು ಇಲ್ಲಿಗೆ ಬಂದು ಪ್ರಚಾರ ಮಾಡಬೇಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮೃತಪಟ್ಟ ಬಾಲಕಿ ಸಹರಾಭಾನು ಕುಟುಂಬಕ್ಕೆ 5 ಲಕ್ಷ ಪರಿಹಾರ ಧನದ ಚೆಕ್‌ ಶಾಸಕರು ವಿತರಿಸಿದರು.

Advertisement

ತಾಪಂ ಉಪಾಧ್ಯಕ್ಷ ಎಲ್.ಮಂಜ್ಯಾನಾಯ್ಕ, ತಹಶೀಲ್ದಾರ್‌ ಡಾ.ನಾಗವೇಣಿ, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್‌, ಪುರಸಭೆ ಸದಸ್ಯ ರೊಕ್ಕಪ್ಪ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಎಸ್ಟಿ ಘಟಕದ ಅಧ್ಯಕ್ಷ ಲೋಕೇಶ್‌, ಉಪಾಧ್ಯಕ್ಷ ಸಣ್ಣ ಹಾಲಪ್ಪ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಬಿ.ಮಹಬೂಬ್‌ಸಾಬ್‌, ತೆಲಿಗಿ ಕರಿಬಸಪ್ಪ, ಸಿ.ಅಬ್ದುಲ್ ಸತಾರಸಾಬ್‌, ಮಹ್ಮದ್‌ ಹುಸೇನ್‌, ಶಬ್ಬೀರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next