Advertisement

ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ

01:17 PM May 30, 2019 | Naveen |

ಹರಪನಹಳ್ಳಿ: ಪುರಸಭೆ ಚುನಾವಣೆಗೆ ಹರಪನಹಳ್ಳಿ ಪಟ್ಟಣದಲ್ಲಿ ಬುಧವಾರ ಶಾಂತಿಯುತ ಮತದಾನ ನಡೆಯಿತು. ಮತದಾರರು ಮುಂಜಾನೆ 7ರಿಂದ ಸಂಜೆ 5 ಗಂಟೆವರೆಗೆ ನಿರ್ಭಯವಾಗಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆದರೆ, ಮತ್ತೆ ಕೆಲವು ಕಡೆಗಳಲ್ಲಿ ಬಿರುಸಿನ ಮತ ಚಲಾವಣೆ ನಡೆಯಿತು.

Advertisement

ಪುರಸಭೆ ಚುನಾವಣೆಗೆ ಪುರುಷರು 19,464, ಹೆಣ್ಣು-19,686, ಇತರೆ 6 ಸೇರಿ ಒಟ್ಟು 39,156 ಮತದಾರರಿದ್ದಾರೆ. ಇದರಲ್ಲಿ ಪುರುಷ 14,356, ಹೆಣ್ಣು-14,160 ಸೇರಿ ಒಟ್ಟು 28,516 ಮತದಾರರು ಹಕ್ಕು ಚಲಾಯಿಸಿದ್ದಾರೆ. ಒಟ್ಟು 72.83ರಷ್ಟು ಮತದಾನವಾಗಿದೆ.

ಪಟ್ಟಣ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತ ಚಲಾವಣೆಗೆ ಜನ ಉತ್ಸಾಹದಿಂದ ಬಂದಿದ್ದರು. ಯುವಕ, ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲದೆ, ಇಳಿವಯಸ್ಸಿನ ಹಿರಿಯರು, ಅಂಗವಿಕಲರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ನಡೆಯಲು ಬಾರದಿದ್ದರೂ ಮತ ಚಲಾಯಿಸಲೇಬೇಕೆಂಬ ತವಕದಿಂದ ಹಿರಿಯರು ಮತಗಟ್ಟೆಗೆ ಕಾಲಿಟ್ಟಿದ್ದು ವಿಶೇಷವಾಗಿತ್ತು. ಅವರನ್ನು ವೀಲ್ಚೇರ್‌ಗಳ ನೆರವಿನಿಂದ ಮತಗಟ್ಟೆಯೊಳಗೆ ಅವರನ್ನು ಕರೆದೊಯ್ದ ಮತದಾನ ಮಾಡಿಸಲಾಯಿತು.

ಸುಮಾರು 9 ಗಂಟೆವರೆಗೆ ಬಿರುಸಿನ ಮತದಾನ ನಡೆಯಿತು. ನಂತರ ಮಧ್ಯಾಹ್ನ 12 ಗಂಟೆ ನಂತರ ಸುಡು ಬಿಸಿಲು ಇದ್ದಿದ್ದರಿಂದ ಮಂದಗತಿಯಲ್ಲಿ ಮತದಾನ ಸಾಗಿತ್ತು. ಸಂಜೆ 4 ಗಂಟೆ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದರು. ಪಟ್ಟಣದ ಬಾಲಕಿಯರ ಶಾಲೆಯಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ, ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ ಮತದಾನ ಮಾಡಿದರು. ಪಟ್ಟಣದ ಉಪ್ಪಾರಗೇರಿಯಲ್ಲಿ 9ನೇ ವಾರ್ಡ್‌ ಮತಗಟ್ಟೆಗೆ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ಚಲವಾದಿ ಪರುಶುರಾಮ ಅವರು ಹರಿಷಿಣ ಶಾಸ್ತ್ರ ಮುಗಿಸಿಕೊಂಡು ನೇರವಾಗಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದರು.

ಅಭ್ಯರ್ಥಿಗಳ ಬೆಂಬಲಿಗರು ಕಾರು, ಬೈಕ್‌, ಆಟೋದಲ್ಲಿ ಮತದಾರರನ್ನು ಮತಗಟ್ಟೆವರೆಗೆ ಕರೆ ತಂದು ಮತದಾನ ಮಾಡಿಸಿದರು. ಮತಗಟ್ಟೆಯಿಂದ 200 ಮೀಟರ್‌ ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ತಮ್ಮ ಅಭ್ಯರ್ಥಿಗೆ ಮತ ನೀಡುವಂತೆ ಮತದಾರರ ಮನವೊಲಿಸುತ್ತಿದ್ದ ದೃಶ್ಯ ಎಲ್ಲಾ ಮತಗಟ್ಟೆಗಳ ಬಳಿ ಸಾಮಾನ್ಯವಾಗಿತ್ತು. ಮತಯಂತ್ರ ದೋಷ ಸೇರಿದಂತೆ ಯಾವ ಮತಗಟ್ಟೆಯಲ್ಲಿ ಗೊಂದಲ, ಗದ್ದಲವಿರಲಿಲ್ಲ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಐಜಿಪಿ ಸೋಮೇಂದ್ರ ಮುಖರ್ಜಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಪುರಸಭೆಯ 27 ವಾರ್ಡ್‌ಗಳಿಗೆ ಸ್ಪರ್ಧೆ ಮಾಡಿದ್ದ ಒಟ್ಟು 75 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 31ರಂದು ನಡೆಯುವ ಮತ ಎಣಿಕೆ ನಂತರ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮಧ್ಯ ನೇರ ಸ್ಪರ್ಧೆ ಏರ್ಪಟ್ಟಿದ್ದು, ಫಲಿತಾಂಶದ ಮೇಲೆ ಎಲ್ಲರ ಗಮನವಿದೆ.

Advertisement

Udayavani is now on Telegram. Click here to join our channel and stay updated with the latest news.

Next