Advertisement

ನ್ಯಾಯಾಲಯ ಅಂಗಳಕ್ಕೆ ಪಿಟಿಪಿ ಲಾಕ್‌ಡೌನ್‌ ಉಲ್ಲಂಘನೆ ಪ್ರಕರಣ

05:21 PM Jun 17, 2020 | Naveen |

ಹರಪನಹಳ್ಳಿ: ತಾಲೂಕಿನ ಲಕ್ಷ್ಮೀಪುರ ತಾಂಡಾದಲ್ಲಿ ಜೂ.15ರಂದು ನಡೆದ ಮಾಜಿ ಸಚಿವ, ಹೂವಿನಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಪುತ್ರನ ವಿವಾಹ ಸಮಾರಂಭದಲ್ಲಿ ಕೋವಿಡ್‌-19 ಕಾನೂನು ಉಲ್ಲಂಘನೆ ಸಂಬಂಧ ಇದುವರೆಗೂ ಯಾವುದೇ ಎಫ್‌ಐಆರ್‌ ದಾಖಲಾಗಿಲ್ಲ. ಈ ಪ್ರಕರಣ ಇದೀಗ ನ್ಯಾಯಾಲಯದ ಅಂಗಳದಲ್ಲಿದೆ.

Advertisement

ದೂರು ದಾಖಲಿಸಲು ಜಿಲ್ಲಾ ಕೋರ್ಟ್ ನಿಂದ ಪರವಾನಗಿ ಪಡೆದುಕೊಳ್ಳುವಂತೆ ಕೋರ್ಟ್‌ ಶಿರಸ್ತೇದಾರ್‌ ಅವರು ತಿಳಿಸಿದ್ದರಿಂದ ತಹಶೀಲ್ದಾರ್‌ ಅವರು ಜಿಲ್ಲಾ ಕೋರ್ಟ್‌ನಿಂದ ಪರವಾನಗಿ ಪಡೆದುಕೊಂಡಿದ್ದಾರೆ. ನಂತರ ದೂರು ನೀಡುವಂತೆ ಅರಸೀಕೆರೆ ಕಂದಾಯ ನಿರೀಕ್ಷಕರಿಗೆ ತಹಶೀಲ್ದಾರ್‌ ಸೂಚಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕಂದಾಯ ನಿರೀಕ್ಷಕರು ತೆರಳಿದಾಗ ನೇರವಾಗಿ ದೂರನ್ನು ಸ್ವೀಕರಿಸುವುದಿಲ್ಲ, ಟಪಾಲ್‌ ಬಾಕ್ಸ್‌ಗೆ ದೂರು ಪ್ರತಿ ಹಾಕಿ ಹೋಗಿ ಎಂದು ತಿಳಿಸಿದ್ದರಿಂದ ಅರಸೀಕೆರೆ ಕಂದಾಯ ನಿರೀಕ್ಷಕ ಶ್ರೀಧರ ಅವರು ನ್ಯಾಯಾಲಯದ ಟಪಾಲ್‌ ಬಾಕ್ಸ್‌ಗೆ ದೂರಿನ ಪ್ರತಿ ಹಾಕಿ ಬಂದಿದ್ದಾರೆ.

ನ್ಯಾಯಾಲಯದಲ್ಲಿ 24 ಗಂಟೆ ಬಳಿಕ ಕೋರ್ಟ್‌ ಸಿಬ್ಬಂದಿ ಟಪಾಲ್‌ ಓಪನ್‌ ಮಾಡಲಿದ್ದು, ನ್ಯಾಯಾಲಯ ಗುರುವಾರ ಪ್ರಕರಣದ ಬಗ್ಗೆ ಗಮನ ಹರಿಸಲಿರುವ ಹಿನ್ನೆಲೆಯಲ್ಲಿ ಈಗ ಎಲ್ಲರ ಚಿತ್ತ ನ್ಯಾಯಾಲಯದ ನಿರ್ಧಾರದತ್ತ ಎನ್ನುವಂತಾಗಿದೆ. ಸದ್ಯ ಶಾಸಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶಕ್ಕಾಗಿ ತಾಲೂಕು ಆಡಳಿತ ಕಾಯ್ದು ಕುಳಿತಿದೆ. ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ನೇರವಾಗಿ ಪೊಲೀಸ್‌ ಠಾಣೆಗೆ ದೂರು ಕೊಡಲು ಬರುವುದಿಲ್ಲ ಕೋರ್ಟ್‌ಗೆ ದೂರು ಸಲ್ಲಿಸಬೇಕು. ಆದರೆ ಅರಸೀಕೆರೆ ಠಾಣೆಗೆ ತಹಶೀಲ್ದಾರ್‌ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಆದರೆ ಇದೀಗ ನ್ಯಾಯಾಧೀಶರು ಕೈಗೊಳ್ಳುವ ನಿರ್ಧಾರದ ಮೇಲೆ ಇಡೀ ಪ್ರಕರಣ ಭವಿಷ್ಯ ನಿಂತಿದೆ.

ಮದುವೆ ಭಾವಚಿತ್ರ ಹಾಗೂ ವಿಡಿಯೋ ಹಾಗೂ ಮಾಜಿ ಸಚಿವರು ನೀಡಿರುವ ಮನವಿ ಬಹುತೇಕ ದಾಖಲೆ ಸಹಿತ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಸೊಸೆ ಡಾ| ಕೆ.ಚರಣಿ ಹೈದ್ರಾಬಾದ್‌ ಮೂಲದವರಾಗಿದ್ದು ವಧು ಜೊತೆ ಹತ್ತಾರು ಜನ ಬಂದಿದ್ದಾರೆ. ಇದರ ಬಗ್ಗೆ ತಾಲೂಕು ಆಡಳಿತ ಏನು ಕ್ರಮಕೈಗೊಂಡಿದೆ ಎಂಬುದು ಇನ್ನೂ ನಿಗೂಢವಾಗಿದೆ. ಆದರೆ ಪುತ್ರನ ಮದುವೆಗೆ ಮುಂಚೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾರದಂತೆ ಪಿ.ಟಿ. ಪರಮೇಶ್ವರನಾಯ್ಕ ಸಾಮಾಜಿಕ ಜಾಲತಾಣದ ಮೂಲಕ ವಿನಂತಿಸಿಕೊಂಡಿದ್ದರು.

ನನ್ನ ಸಹೋದರನ ಮದುವೆ ಹಿನ್ನೆಲೆ ಅರಸೀಕೆರೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದೆ. ಜೊತೆಗೆ ತಾಲೂಕಾ ಆಡಳಿತಕ್ಕೂ ಮನವಿ ನೀಡಿದ್ದೆ. ಆದರೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ನೋಡಲು ಜನ ಸೇರಿದ್ದರು. ಮೇಲಾಗಿ ಡಾ| ಜಿ.ಪರಮೇಶ್ವರ ಅವರು ಹೆಲಿಕಾಪ್ಟರ್‌ನಲ್ಲಿ ಬಂದಿದ್ದರಿಂದ ಹೆಲಿಕಾಪ್ಟರ್‌ ನೋಡಲು ಜನ ಬಂದಿದ್ದರು. ನಮ್ಮ ಬೀಗರು ಆಂಧ್ರಪ್ರದೇಶದಿಂದ ಬಂದಿದ್ದರು. ಅವರಿಗೆ ಆ ರಾಜ್ಯದಲ್ಲಿ ಹಾಗೂ ನಮ್ಮಲ್ಲಿ ಕೂಡಾ ಪ್ರಾಥಮಿಕ ತಪಾಸಣೆ ಮಾಡಲಾಗಿದೆ ಎಂದು ಪರಮೇಶ್ವರನಾಯ್ಕ ಪುತ್ರ, ಲಕ್ಷ್ಮೀಪುರ ಗ್ರಾಪಂ ಅಧ್ಯಕ್ಷ ಪಿ.ಟಿ. ಭರತ್‌ ತಿಳಿಸಿದ್ದಾರೆ.

Advertisement

ಕಾನೂನಿಗಿಂತ ದೊಡ್ಡವರ್ಯಾರು ಇಲ್ಲ. ಕಾನೂನಿಗೆ ಗೌರವ ಕೊಡುವೆ. ಮೇಲಾಗಿ ನಿನ್ನೆ ಮದುವೆಯಲ್ಲಿ ಹೆಲಿಕಾಪ್ಟರ್‌ ಬಂದಿತ್ತು. ಹೆಲಿಕಾಪ್ಟರ್‌ ನೋಡಲೇ ಬಹುತೇಕರು ಬಂದಿದ್ದರು. ಈ ಮೊದಲೇ ನಾನು ಮದುವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರದಂತೆ ಜನರಿಗೆ ವಿನಂತಿ ಮಾಡಿದ್ದೆ. ಆದರೂ ಕೂಡಾ ಜನ ಸೇರಿದೆ. ಕಾನೂನಿಗೆ ನಾನು ಗೌರವ ಕೊಡುವೆ.
ಪಿ.ಟಿ.ಪರಮೇಶ್ವರನಾಯ್ಕ,
ಶಾಸಕ

ಲಕ್ಷ್ಮೀಪುರ ತಾಂಡಾದಲ್ಲಿ ನಡೆದ ಮಾಜಿ ಸಚಿವ ಪರಮೇಶ್ವರನಾಯ್ಕ ಪುತ್ರನ ವಿವಾಹ ವಿಚಾರವಾಗಿ ಈ ಬಗ್ಗೆ ಎಫ್‌ ಐಆರ್‌ ಆಗುವರೆಗೆ ನಾವು ಏನು ಹೇಳಲು ಆಗಲ್ಲ. ಎಫ್‌ಐಆರ್‌ ಬುಕ್‌ ಆದ ಬಳಿಕ ಸೂಕ್ತ ತನಿಖೆ ಮಾಡಿ ಕ್ರಮಕೈಗೊಳ್ಳುತ್ತೇವೆ. ಅಲ್ಲಿಯವರೆಗೆ ಏನು ಪ್ರತಿಕ್ರಿಯೆ ಕೊಡಲ್ಲ. ಮದುವೆ ವಿಚಾರವಾಗಿ ಚರ್ಚೆ ನಡೆದಿದ್ದು, ದೂರು ಬಂದರೆ ಕ್ರಮ ಜರುಗಿಸುತ್ತೇವೆ.
ನಂಜುಂಡಸ್ವಾಮಿ,
ಬಳ್ಳಾರಿ ಐಜಿಪಿ

Advertisement

Udayavani is now on Telegram. Click here to join our channel and stay updated with the latest news.

Next