Advertisement

ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ

04:39 PM May 25, 2019 | Team Udayavani |

ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣೆ ಏರ್ಪಟ್ಟಿದ್ದು, ಕೆಲವು ವಾರ್ಡ್‌ಗಳಲ್ಲಿ ಜೆಡಿಎಸ್‌ ಪಕ್ಷವು ನಿರ್ಣಾಯಕ ಪಾತ್ರವಹಿಸಲಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಮೈತ್ರಿ ಮುರಿದು ಬಿದ್ದಿರುವುದು ಬಿಜೆಪಿಗೆ ಲಾಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಪಟ್ಟಣದ ಒಟ್ಟು 27 ವಾರ್ಡ್‌ಗಳ ಪೈಕಿ ಗುಡೇಕೋಟೆ, ಕುರುಬರಗೇರಿ, ಸಂಡೂರಗೇರಿ, ಉಪ್ಪಾರಗೇರಿ, ಶೀಲಾರಗೇರಿ, ಸಾಳೇರಕೇರಿ, ಅಂಬೇಡ್ಕರ್‌ ನಗರ, ಹುಲ್ಲುಗರಡಿಕೇರಿ, ಗುಂಡಿನಕೇರಿ, ವಾಲ್ಮೀಕಿ ನಗರ, ಗಾಜೀಕೇರಿ ಸೇರಿ ಒಟ್ಟು 11 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣೆ ಇದೆ. ಅಗಸನಕಟ್ಟೆ, ಜೋಯಿಷರಕೇರಿ, ಬಾಪೂಜಿ ಬಡಾವಣೆ, ಸುಣ್ಣಗಾರಗೇರಿ, ಚಿತ್ತಾರಗೇರಿ, ಪಠಾಣಗೇರಿ, ಬ್ರೂಸ್‌ಪೇಟೆ, ಮೇಗಳಪೇಟೆ, ಹಳೇ ಕುರುಬರಗೇರಿ ಸೇರಿ ಒಟ್ಟು 9 ವಾರ್ಡ್‌ಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ವಾರ್ಡ್‌ಗಳಾದ ಜೋಯಿಸರಕೇರಿ-1, ಬಾಣಗೇರೆ-1, ಪಠಾಣಗೇರಿ-1, ಹಿಪ್ಪಿತೋಟ-1, ತೆಲುಗರ ಓಣಿ-1, ಗುಡಿಕೇರಿ-1, ಗೌಳೇರಕೇರಿ-2, ಮೇಗಳಪೇಟೆ-1, ಕೊರವರಗೇರಿ-1, ಬ್ರೂಸ್‌ಪೇಟೆ-1, ತೆಕ್ಕದಗರಡಿಕೇರಿ-1 ಸೇರಿ ಒಟ್ಟು 12 ಜನ ಪಕ್ಷೇತರ ಅಭ್ಯರ್ಥಿಗಳು ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಹಿಪ್ಪಿತೋಟ-ಬಿ.ನಜೀರಅಹ್ಮದ್‌, ತೆಲುಗರ ಓಣಿ-ಬಂಗ್ಲೆ ಸೋಮಶೇಖರ್‌, ಅಂಬೇಡ್ಕರ್‌ ನಗರ ಎಚ್.ಕೊಟ್ರೇಶ್‌, ಗಾಜಿಕೇರಿ ಎಚ್.ಕೆ.ಹಾಲೇಶ್‌ ಸೇರಿ ಒಟ್ಟು 4 ಜನ ಹಾಗೂ ಬಿಜೆಪಿಯಲ್ಲಿ ಸಂಡೂರಗೇರಿಯಿಂದ ಬೂದಿ ನವೀನ್‌ಗೆ ಮಾತ್ರ ಹಾಲಿ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ.

ಕಾಂಗ್ರೆಸ್‌ ಪಾಳೆಯದಿಂದ ವಾರ್ಡ್‌ ನಂ.4ರಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ಕೆ.ಎಂ.ಕವಿತಾ ವಾಗೀಶ್‌, ವಾರ್ಡ್‌ ನಂ.13ರಲ್ಲಿ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ರಾಜ್ಯ ಸಂಯೋಜಕ ಡಿ.ಅಬ್ದುಲ್ರಹಿಮಾನ್‌, ವಾರ್ಡ್‌ ನಂ.23ರಲ್ಲಿ ಕಾಂಗ್ರೆಸ್‌ ಕಾರ್ಮಿಕ ಘಟಕದ ಬ್ಲಾಕ್‌ ಅಧ್ಯಕ್ಷ ಚಿಕ್ಕೇರಿ ಬಸಪ್ಪ ಪತ್ನಿ ಹನುಮಕ್ಕ, ವಾರ್ಡ್‌ ನಂ.25ರಲ್ಲಿ ಪುರಸಭೆ ಮಾಜಿ ಸದಸ್ಯ ದುರುಗಪ್ಪ ಕಾಂಗ್ರೆಸ್‌ ಪಕ್ಷದ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದಿರುವುದು ಪಕ್ಷದ ವರಿಷ್ಠರಿಗೆ ತಲೆನೋವು ತರಿಸಿದೆ. ಬಂಡಾಯ ಅಭ್ಯರ್ಥಿಗಳು ಕೆಲವೆಡೆ ಕಾಂಗ್ರೆಸ್‌ ಅಭ್ಯರ್ಥಿಗಳ ಸೋಲಿಗೆ ಕಾರಣರಾಗಬಹುದು ಅಥವಾ ಮತ್ತೂಂದೆಡೆ ಗೆಲುವು ಸಾಧಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆಯಿದೆ. ಬಿಜೆಪಿ ಮೊಗಸಾಲೆಯಲ್ಲಿ ಪ್ರಮುಖವಾಗಿ ವಾರ್ಡ್‌ ನಂ.6ರಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಕಣವಿಹಳ್ಳಿ ಗಂಗಮ್ಮ ಬಂಡಾಯ ಬಾವುಟ ಹಾರಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದಾರೆ.

ಜೆಡಿಎಸ್‌ ಪಕ್ಷವು 27 ವಾರ್ಡ್‌ಗಳ ಪೈಕಿ ಕೇವಲ 9 ವಾರ್ಡ್‌ಗಳಲ್ಲಿ ಕಣಕ್ಕಿಳಿದ್ದು, ಬಹುತೇಕ ವಾರ್ಡ್‌ಗಳಲ್ಲಿ ಕಿಂಗ್‌ಮೇಕರ್‌ ಆಗಿದೆ. ಕೆಲವೆಡೆ ಅಭ್ಯರ್ಥಿಗಳ ಗೆಲುವಿಗೆ ಸಹಾಯವಾಗಬಹುದು, ಮತ್ತೂಂದೆಡೆ ಗೆಲ್ಲುವ ಅಭ್ಯರ್ಥಿಗಳಿಗೆ ಕಂಠಕವಾಗುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ. ಕಳೆದ ಎರಡು ದಿನಗಳಿಂದ ವಾರ್ಡ್‌ಗಳಲ್ಲಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಕಾಂಗ್ರೆಸ್‌ ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ವಲಯದಿಂದ ಶಾಸಕ ಜಿ.ಕರುಣಾಕರರೆಡ್ಡಿ ಪ್ರಚಾರ ಕಣಕ್ಕೆ ಧುಮುಕಿಲ್ಲ. ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ.

ಕೆಪಿಸಿಸಿ ಮಹಿಳಾ ಕಾರ್ಯದರ್ಶಿ ನಿರ್ಲಕ್ಷ್ಯ!
ಪುರಸಭೆ ಟಿಕೆಟ್ ಹಂಚಿಕೆ ಗೊಂದಲ ಕಾಂಗ್ರೆಸ್‌ ಪಾಳಯದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಟಿಕೆಟ್ ಹಂಚಿಕೆ ಮೊದಲು ನಡೆದ ಪೂರ್ವಭಾವಿ ಸಭೆ ಹೊರತುಪಡಿಸಿ ಉಳಿದ ಯಾವುದೇ ಸಭೆ, ಪ್ರಚಾರ ಸಮಾರಂಭದಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಕಾಣಿಸಿಕೊಳ್ಳುತ್ತಿಲ್ಲ. ಅಭ್ಯರ್ಥಿಗಳಿಗೆ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಟಿಕೆಟ್ ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಎಂ.ಪಿ. ಲತಾ ಅವರನ್ನು ಪ್ರಚಾರಕ್ಕೆ ಆಹ್ವಾನಿಸಿದರೆ ಸಚಿವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎನ್ನುವ ಆತಂಕ ಅಭ್ಯರ್ಥಿಗಳಲ್ಲಿ ಕಾಡುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರಾದ್ಯಂತ ಪಕ್ಷದ ಮುಖಂಡರೊಂದಿಗೆ ಸಂಚರಿಸಿ ಸ್ವತಂತ್ರ್ಯವಾಗಿ ಮತಯಾಚನೆ ಮಾಡಿದ್ದ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಟಿ.ಪಿ. ಪರಮೇಶ್ವರ ನಾಯ್ಕ ಪುರಸಭೆ ಚುನಾವಣೆಗೆ ಎಂಟ್ರಿ ಕೊಟ್ಟಿದ್ದರಿಂದ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆೆನ್ನಲಾಗುತ್ತಿದೆ. ಎಂ.ಪಿ. ಲತಾ ಮಲ್ಲಿಕಾರ್ಜುನ ಮತ್ತು ಪಿ.ಟಿ. ಪರಮೇಶ್ವರನಾಯ್ಕ ಅವರ ಬೆಂಬಲಿಗರ ಮುಸುಕಿನ ಗುದ್ದಾಟ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಒಳ ಹೊಡೆತ ಕೊಡುವ ಲಕ್ಷಣಗಳು ಗೋಚರಿಸುತ್ತಿವೆ.
Advertisement
Advertisement

Udayavani is now on Telegram. Click here to join our channel and stay updated with the latest news.

Next