ಹರಪನಹಳ್ಳಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಹರಪನಹಳ್ಳಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎಂಬುವುದನ್ನು ಸಾಬೀತುಪಡಿಸಬೇಕು ಎಂದು ಕೌಶಲ್ಯಾಭಿವೃದ್ದಿ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಕರೆ ನೀಡಿದರು.
ಪಟ್ಟಣದ ವಾಲ್ಮೀಕಿ ಭವನದ ಬಳಿ ಬುಧವಾರ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್ ಹಾಗೂ ಅವರ ಬೆಂಬಲಿಗರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
ಸ್ವಾತಂತ್ರ್ಯ ಬಂದಾಗಿನಿಂದ 2008ರವರೆಗೆ ಒಂದು ಬಾರಿ ಪಕ್ಷೇತರ ಅಭ್ಯರ್ಥಿಯನ್ನು ಹೊರತುಪಡಿಸಿ ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದೆ. 2008ರಲ್ಲಿ ಬಳ್ಳಾರಿಯ ಅಕ್ರಮ ಗಣಿ ಹಣ ಕ್ಷೇತ್ರಕ್ಕೆ ಆಗಮಿಸಿ ಮತದಾರರು ಮನಸ್ಸು ಕೆಡಿಸಿ ಕಾರ್ಯಕರ್ತರನ್ನು ದಾರಿ ತಪ್ಪುವಂತೆ ಮಾಡಿದ ಪರಿಣಾಮ ಸಜ್ಜನ ರಾಜಕಾರಣಿ ಎಂ.ಪಿ.ಪ್ರಕಾಶ್‌ರವರು ಸೋಲು ಕಂಡರು. ಕುರುಡು ಕಾಂಚಾಣದ ಮುಂದೆ ಕಾರ್ಯಕರ್ತರ ಶ್ರಮಕ್ಕೆ ಬೆಲೆ ಸಿಗಲಿಲ್ಲ. ಇಂತಹ ತಪ್ಪು ಮುಂದೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಲು ಪಣ ತೊಡಬೇಕು ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್ ಮಾತನಾಡಿ, ಯುವ ಕಾಂಗ್ರೆಸ್ ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಪುರಸಭೆ ಸದಸ್ಯ, ಉಪಾಧ್ಯಕ್ಷ, ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ತಳಮಟ್ಟದಿಂದ ಸಂಘಟಿಸಿದ ಅನುಭವ ನನಗಿದೆ. ಅಧಿಕಾರ ಮತ್ತು ಹಣಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿಲ್ಲ. ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಯಾವ ಕೆಲಸ ಕೊಟ್ಟರೂ ನಿರ್ವಹಿಸುತ್ತೇನೆ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ ಮಾತನಾಡಿ, ಪುರಸಭೆ ಚುನಾವಣೆ ಸಂಬಂಧ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದು, ಯಾರಿಗೆ ಟಿಕೆಟ್ ನೀಡಿದ್ದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎನ್ನುವ ಕಾರ್ಯಕರ್ತರ ಉತ್ಸಾಹ ಅಧಿಕಾರ ಹಿಡಿಯುವ ಮುನ್ಸೂಚನೆ ನೀಡಿದೆ. ಪಕ್ಷ ತೊರೆದವರೆಲ್ಲಾ ಮರಳಿ ಬರುತ್ತಿದ್ದು, ಇದು ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್, ಯರಬಳ್ಳಿ ಉಮಾಪತಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಬಿ.ಕೆ.ಪ್ರಕಾಶ, ಎಸ್.ಮಂಜುನಾಥ, ಜಿ.ಪಂ ಸದಸ್ಯ ಎಚ್.ಬಿ.ಪರಶುರಾಮಪ್ಪ, ಪಿ.ಎಲ್. ಪೋಮ್ಯಾನಾಯ್ಕ, ಮುಖಂಡರಾದ ಶಶಿಧರ ಪೂಜಾರ, ತೆಲಿಗಿ ಚನ್ನಪ್ಪ, ಆಲದಹಳ್ಳಿ ಷಣ್ಮುಖಪ್ಪ, ಚಿರಸ್ತಹಳ್ಳಿ ಮರಿಯಪ್ಪ, ಮುತ್ತಿಗಿ ಜಂಬಣ್ಣ, ಪಿ.ಟಿ.ಭರತ ಇತರರು ಇದ್ದರು.