Advertisement

ರಂಗೇರಿದ ಕಣ-ರಾಜಕೀಯ ಧ್ರುವೀಕರಣ!

12:19 PM May 15, 2019 | Naveen |

ಹರಪನಹಳ್ಳಿ: ತಾಲೂಕಿನ ರಾಜಕಾರಣದಲ್ಲಿ ಲೋಕಸಭಾ ಚುನಾವಣೆಗಿಂತಲೂ ಸ್ಥಳೀಯ ಪುರಸಭೆ ಚುನಾವಣೆ ಅತ್ಯಂತ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್‌ ಪಕ್ಷವು ಪುರಸಭೆ ಚುನಾವಣೆಯ ಉಸ್ತುವಾರಿಯನ್ನು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕರಿಗೆ ನೀಡಿರುವುದರಿಂದ ರಾಜಕಾರಣದಲ್ಲಿ ಸಂಚಲನ ಉಂಟಾಗಿದ್ದು, ಪಕ್ಷಾಂತರ ಪರ್ವ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಕ್ಷ ತೊರೆದು ಹೋದ ಮುಖಂಡರನ್ನು ಒಂದೇ ವೇದಿಕೆಯಡಿ ಪುನಃ ಕರೆ ತರುವ ಕಸರತ್ತು ತೆರೆಮರೆಯಲ್ಲಿ ನಡೆಯುತ್ತಿದೆ.

Advertisement

ಕಳೆದ ಒಂದು ದಶಕಗಳ ನಂತರ ತಾಲೂಕಿನ ರಾಜಕಾರಣಕ್ಕೆ ಪ್ರವೇಶ ಪಡೆದುಕೊಂಡಿರುವ ಪಿ.ಟಿ.ಪರಮೇಶ್ವರನಾಯ್ಕ ಅವರು ಶತಾಯಗತಾವಾಗಿ ಕಾಂಗ್ರೆಸ್‌ ಪಕ್ಷವು ಪುರಸಭೆ ಚುಕ್ಕಾಣಿ ಹಿಡಿಯುವಂತೆ ಮಾಡಲು ತಂತ್ರಗಾರಿಕೆ ರೂಪಿಸುವಲ್ಲಿ ನಿರತವಾಗಿದ್ದಾರೆ. ಆದರೆ ಪರಮೇಶ್ವರನಾಯ್ಕ ಆಗಮನದಿಂದ ಎಂ.ಪಿ. ರವೀಂದ್ರ ಬೆಂಬಲಿಗರಲ್ಲಿ ತಳಮಳವೂ ಶುರುವಾಗಿದೆ. ಎಂ.ಪಿ.ರವೀಂದ್ರ ಮತ್ತು ಪರಮೇಶ್ವರನಾಯ್ಕ ಅವರ ನಡುವಿನ ಮುನಿಸು ತಾರಕಕ್ಕೇರಿ 10 ವರ್ಷಗಳ ಕಾಲ ಹರಪನಹಳ್ಳಿಯ ಯಾವುದೇ ಕಾರ್ಯಕ್ರಮಕ್ಕೆ ಪರಮೇಶ್ವರನಾಯ್ಕ ಅವರನ್ನು ಆಹ್ವಾನಿಸಿರಲಿಲ್ಲ. ಅಲ್ಲದೇ ಯಾವುದೇ ಫ್ಲೆಕ್‌ಗಳಲ್ಲಿ ಅವರ ಭಾವಚಿತ್ರವೂ ಕಾಣಿಸಿರಲಿಲ್ಲ. ಎಂ.ಪಿ.ರವೀಂದ್ರ ಜತೆಗೂಡಿ ತಮ್ಮನ್ನು ನಿರ್ಲಕ್ಷಿಸಿದ್ದ ಕಾಂಗ್ರೆಸ್‌ ಮುಖಂಡರನ್ನು ಹಣಿಯಲು ಪರಮೇಶ್ವರನಾಯ್ಕ ವ್ಯವಸ್ಥಿತ ರಾಜಕಾರಣಕ್ಕೆ ಅಡಿ ಇಟ್ಟಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಶಾಸಕ ಎಂ.ಪಿ.ರವೀಂದ್ರ ಅಗಲಿಕೆ ನಂತರ ಅವರ ಸಹೋದರಿ ಕೆಪಿಸಿಸಿ ಮಹಿಳಾ ಘಟಕ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಆವರು ಪಕ್ಷದ ನೇತೃತ್ವ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಈಚೆಗೆ ನಡೆದ ಲೋಕಸಭೆ ಚುನಾವಣೆಗೆ ಹಳ್ಳಿ ಹಳ್ಳಿಗೆ ತೆರಳಿ ಸಹೋದರನ ಅಭಿವೃದ್ಧಿ ಕೆಲಸಗಳ ಮೂಲಕ ಮತಯಾಚನೆ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿ ಯಾವೊಬ್ಬ ಸ್ಟಾರ್‌ ಪ್ರಚಾರಕರೂ ಆಗಮಿಸಿರಲಿಲ್ಲ. ಆದರೆ ಪುರಸಭೆ ಚುನಾವಣೆಗೆ ಸ್ಥಳೀಯ ಯಾವ ಮುಖಂಡರ ಅಭಿಪ್ರಾಯ ಪಡೆಯದೇ ಇದ್ದಕ್ಕಿದ್ದಂತೆಯೇ ಪರಮೇಶ್ವರನಾಯ್ಕ ಅವರನ್ನು ಉಸ್ತುವಾರಿಯನ್ನಾಗಿರುವುದು ಕೆಲವು ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಟಿಕೆಟ್ ಹಂಚಿಕೆಯಲ್ಲಿ ವ್ಯತ್ಯಾಸವಾದಲ್ಲಿ ಕೆಲವು ಕಾಂಗ್ರೆಸ್‌ ಮುಖಂಡರು ಪಕ್ಷ ತೊರೆಯುವ ಮುನ್ಸೂಚನೆಗಳು ಗೋಚರಿಸುತ್ತಿವೆ. ಇದಕ್ಕೆ ಪ್ರತಿತಂತ್ರವಾಗಿ ಕಾಂಗ್ರೆಸ್‌ ಪಕ್ಷವನ್ನು ತೊರೆದು ಹೋದ ನಾಯಕರನ್ನು ಪುನಃ ಕರೆ ತರುವ ಪ್ರಯತ್ನವೂ ತೆರೆಮರೆಯಲ್ಲಿ ನಡೆಯುತ್ತಿದೆ. ಪಿ.ಟಿ.ಪರಮೇಶ್ವರನಾಯ್ಕ ಅವರು ತಾಲೂಕಿನ ರಾಜಕಾರಣದಲ್ಲಿ ಎಂಟ್ರಿ ಕೊಟ್ಟಿರುವುದು ಒಂದೆಡೆ ಲಾಭ ತಂದು ಕೊಡಬಹುದು. ಮತ್ತೂಂದೆಡೆ ದೊಡ್ಡ ಮಟ್ಟದ ಪಕ್ಷಾಂತರ ಪರ್ವಕ್ಕೆ ನಾಂದಿ ಆಗುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ಪುರಸಭೆ ಚುನಾವಣೆಯು ರಾಜಕೀಯ ಧ್ರುವೀಕರಣಕ್ಕೆ ಸಾಕ್ಷಿಯಾಗಿದೆ.

ಹರಪನಹಳ್ಳಿಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿರುವ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರ ಬಳಿ ಪಕ್ಷವು ಪುರಸಭೆ ಚುನಾವಣೆಯ ಪಕ್ಷ ಬಿ-ಫಾರಂ ನೀಡುತ್ತದೆ ಎಂಬ ನಿರೀಕ್ಷೆ ಆಕಾಂಕ್ಷಿಗಳದ್ದಾಗಿತ್ತು. ಆದರೆ ಇದೀಗ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವಯೋಗಿ ಅವರು ಪರಮೇಶ್ವರನಾಯ್ಕ ಜತೆಗೆ ಉತ್ತಮ ಸಂಬಂಧ ಹೊಂದಿರುವುದರಿಂದ ಹಾಗೂ ಉಸ್ತುವಾರಿ ಎನ್ನುವ ಕಾರಣಕ್ಕೆ ಪರಮೇಶ್ವರನಾಯ್ಕ ಸುಪರ್ದಿಗೆ ಬಿ-ಫಾರಂ ನೀಡಬಹುದು ಎಂಬ ಆತಂಕ ಎಂ.ಪಿ.ರವೀಂದ್ರ ಬೆಂಬಲಿಗರಲ್ಲಿ ಕಾಡುತ್ತಿದೆ. ಹೀಗಾಗಿ ಟಿಕೆಟ್ಗಾಗಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರ ಮನವೊಲಿಕೆಯಲ್ಲಿ ತೊಡಗಿದ್ದ ಆಕಾಂಕ್ಷಿಗಳು ಇದೀಗ ಪರಮೇಶ್ವರನಾಯ್ಕ ಅವರ ಮನೆಯ ಬಾಗಿಲು ತುಳಿಯುವಂತಾಗಿದರೂ ಅಚ್ಚರಿಯಿಲ್ಲ.

Advertisement

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next