ಹರಪನಹಳ್ಳಿ: ತಾಲೂಕಿನ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಕೋಡಿ ಒಡೆದಿದ್ದು, ಅಪಾರ ಪ್ರಮಾಣದಲ್ಲಿ ಕೆರೆ ನೀರು ಪೋಲಾಗುತ್ತಿದೆ. ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಹೊರವಲದಲ್ಲಿರುವ ಕೆರೆ ಕೋಡಿ ಒಡೆದಿರುವುದರಿಂದ ಗ್ರಾಮದ ಜನರಿಗೆ ಯಾವುದೇ ರೀತಿ ಹಾನಿ ಆಗಿಲ್ಲ. ಆದರೆ ಜಾನುವಾರುಗಳಿಗೆ ಆಸರೆಯಾಗಿದ್ದ ನೀರು ಸಮೀಪದ ನೀಲಗುಂದ ಹಳ್ಳಕ್ಕೆ ಹರಿದು ಹೋಗುತ್ತಿದೆ.
ಮಾಚಿಹಳ್ಳಿ ಕೊರಚರಹಟ್ಟಿ, ಗುರುಶಾಂತನಹಳ್ಳಿ, ಬೈರಾಪುರ ಮೂರು ಗ್ರಾಮಗಳ ಆಸರೆ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಅಲ್ಲದೇ ಸುತ್ತಮುತ್ತಲಿನ ಬೋರವೆಲ್‌ಗಳ ಅಂತರ್ಜಲ ಹೆಚ್ಚಳವಾಗಿತ್ತು. ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ತುಂಬಿದ್ದ ಕೆರೆ ಇದೀಗ ಕೇವಲ ಗುಂಡಿಗಳಲ್ಲಿ ಮಾತ್ರ ನೀರು ಉಳಿದುಕೊಂಡು ಉಳಿದ ನೀರೆಲ್ಲಾ ಹರಿದು ಹೋಗಿದೆ.
ಬೇಸಿಗೆ ಆಗಿರುವುದರಿಂದ ಕೆರೆ ಭಾಗದ ಜಮೀನುಗಳಲ್ಲಿ ಯಾವುದೇ ಬೆಳೆ ಹಾಕದಿರುವುದರಿಂದ ಏನೂ ಹಾನಿ ಸಂಭವಿಸಿಲ್ಲ. ಆದರೆ ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಏಪ್ರಿಲ್ ಮತ್ತು ಮೇ ತಿಂಗಳವರೆಗೆ ಇರುತ್ತಿತ್ತು. ಆದರೆ ನೀರು ಪೋಲಾಗಿ ಹರಿದು ಹೋಗಿರುವುದರಿಂದ ಮುಂದಿನ ದಿನಗಳಲ್ಲಿ ಜಾನುವಾರುಗಳಿಗೆ ನೀರು ಕುಡಿಸಲು 6 ಕಿಮೀ ದೂರದಲ್ಲಿರುವ ನೀಲಗುಂದ ಹಳ್ಳ ಅಥವಾ ಕೆರೆಗೆ ಹೋಗಬೇಕಾಗಿದೆ. ಕೂಡಲೇ ಅಧಿಕಾರಿಗಳು ಕೆರೆಯ ಏರಿ ದುರಸ್ತಿಗೊಳಿಸಬೇಕು ಎಂದು ಮಾಚಿಹಳ್ಳಿ ಗ್ರಾಮದ ಮುಖಂಡರಾದ ಎಂ.ಮಲ್ಲೇಶ್, ಅಂಬರೀಷ್, ಶಿವಣ್ಣ ಇತರರು ಒತ್ತಾಯಿಸಿದ್ದಾರೆ.
ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಬಳಿ ಇರುವ ಹಳೆ ಕೆರೆಯುವ ಕಳೆದ ಮಳೆಗಾಲದಲ್ಲಿ ಕೋಡಿ ಭಾಗದಲ್ಲಿ ಹಾನಿಗೊಂಡಿತ್ತು. ಸದರಿ ಕೆರೆಯ ಕೋಡಿ ಹಾಗೂ ಒಡ್ಡಿನ ದುರಸ್ತಿಗಾಗಿ 2019-20ನೇ ಸಾಲಿನಲ್ಲಿ ಕೆಕೆಆರ್‌ಡಿ ಅನುದಾನದಡಿ 56 ಲಕ್ಷ ರೂ. ಗಳಿಗೆ ದುರಸ್ತಿ ಕಾಮಗಾರಿಯನ್ನು ಹಮ್ಮಿಕೊಳ್ಳಲು ಸಿದ್ದತೆ ನಡೆಸಿದ್ದು, ಕಾರ್ಯಾದೇಶ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಕೋಡಿ ಹೊಡೆದು ಹೋಗಿದೆ ಎಂದು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಪಾಟೀಲ್ ತಿಳಿಸಿದ್ದಾರೆ.
ಪಂಚಾಯತರಾಜ್ ಇಂಜಿನಿಯರಿಂಗ್ ಉಪ ವಿಭಾಗ ವ್ಯಾಪ್ತಿಗೆ ಮಾಚಿಹಳ್ಳಿ ಕೊರಚರಹಟ್ಟಿ ಗ್ರಾಮದ ಕೆರೆ ಸೇರಿದೆ. ಕೆರೆಯ ಕೋಡಿ ಕೆಳ ಭಾಗದಿಂದ ಪೈಪಿಂಗ್ ಆಗಿ ನೀರು ಹೊರ ಹೋಗುತ್ತಿದ್ದು, ಕೆರೆಗೆ ಇನ್ನೂ ಹೆಚ್ಚಿನ ಹಾನಿ ಉಂಟಾಗುವ ಸಂಭವವಿರುತ್ತದೆ. ಆದ್ದರಿಂದ ಕೂಡಲೇ ಕಲ್ಲು ಮತ್ತು ಮಣ್ಣು ಹಾಕಿ ಸಾಧ್ಯವಾದಷ್ಟು ನೀರು ಹೊರಗೆ ಹೋಗದಂತೆ ತಡೆಗಟ್ಟಲು ಇಂಜಿನಿಯರ್‌ಗೆ ಸೂಚನೆ ನೀಡಿ ಸ್ಥಳಕ್ಕೆ ಕಳುಹಿಸಿ ಕೊಡಲಾಗಿದೆ. ಕೆರೆ ಕೋಡಿ ಒಡೆದು ನೀರು ಪೋಲಾಗಿರುವ ಕುರಿತು ಜಿಪಂ ಸಿಇಒ ಹಾಗೂ ಜಿಪಂ ಇಇ ಅವರ ಗಮನಕ್ಕೆ ತರಲಾಗಿದೆ.
ಸತೀಶ ಪಾಟೀಲ್,
ಎಇಇ ಜಿ.ಪಂ ಉಪ ವಿಭಾಗ.