ಹರಪನಹಳ್ಳಿ: ಹರಪನಹಳ್ಳಿ ಬಚಾವೋ, ಭ್ರಷ್ಠಚಾರ ಹಠಾವೋ ಎನ್ನುವ ಘೋಷವಾಕ್ಯದಡಿಯಲ್ಲಿ ಲಂಚ ಕೇಳುವ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಘೇರಾವ್ ಹಾಕುವ ಕಾರ್ಯಕ್ರಮವನ್ನು ಸಿಪಿಐ(ಎಂಎಲ್) ಲಿಬರೇಷನ್ ಪಕ್ಷ ಮತ್ತು ಅಖೀಲ ಭಾರತ ಕಿಸಾನ್ ಮಹಾಸಭಾ ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖೀಲ ಭಾರತ ಕಿಸಾನ್ ಮಹಾಸಭಾ ರಾಜ್ಯಾಧ್ಯಕ್ಷ ಇದ್ಲಿ ರಾಮಪ್ಪ ಅವರು, ಪಟ್ಟಣದ ಮಿನಿವಿಧಾನಸೌಧ ಎದುರು ಮಾ. 25ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಮ್ಮಿಕೊಳ್ಳಲಾಗುವುದು. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತದೆ. ಹೈಕೋರ್ಟ್ ಆದೇಶವಿದ್ದರೂ ಹಿರೇಕೆರೆ ಒತ್ತುವರಿ ತೆರವುಗೊಳಿಸುವಲ್ಲಿ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಲಂಚಕೊಟ್ಟರೆ ಮಾತ್ರ ಕೆಲಸ ಎನ್ನುವಂತಾಗಿದೆ ಎಂದು ದೂರಿದರು.
ತಾಲೂಕಿನ ಆಡಳಿತ ಯಂತ್ರ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಧಿಕಾರಿಗಳು ರೈತರ, ಬಡವರ ಪರ ಕೆಲಸ ಕಾರ್ಯ ಮಾಡುತ್ತಿಲ್ಲ. ಕ್ಷೇತ್ರದ ಶಾಸಕ ಕರುಣಾಕರರೆಡ್ಡಿಯವರ ಆಡಳಿತ ವೈಖರಿ ಇದಕ್ಕೆಲ್ಲ ಕಾರಣವಾಗಿದೆ. ಶಾಸಕರು ಹರಪನಹಳ್ಳಿ ಕ್ಷೇತ್ರದಲ್ಲಿ ಮನೆ ಮಾಡಿಕೊಂಡು ವಾಸಿಸದೇ ಅತಿಥಿ ರೀತಿ ಕ್ಷೇತ್ರಕ್ಕೆ ಬಂದು ಅತಿಥಿ ರೀತಿ ಹೋಗುತ್ತಾರೆ. ಹೀಗಾಗಿ ತಾಲೂಕಿನಲ್ಲಿ ಬೋಗಸ್ ಕಾಮಗಾರಿಗಳು ಹೆಚ್ಚಾಗಿ ನಡೆಯುತ್ತಿದ್ದು, ಇದಕ್ಕೆ ಶಾಸಕರ ಕೃಪಾಕಟಾಕ್ಷವಿದೆ ಎಂದು ಆರೋಪಿಸಿದರು. ಜಿ. ದಾದಪುರ ಗ್ರಾಮದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಈ ಹಿಂದೆ 2 ಬಾರಿ ನಡೆದಿದ್ದು, ಈಗ ಅದೇ ರಸ್ತೆ ಕಾಮಗಾರಿಗೆ ಮತ್ತೇ ಜೆಸಿಬಿಯಿಂದ ಹೊಸಮುಖ ಮಾಡಿ ಬಿಲ್ ತೆಗೆದುಕೊಳ್ಳುವ ಸಂಚಿನಲ್ಲಿರುತ್ತಾರೆ. ಮತ್ತಿಹಳ್ಳಿ ಗ್ರಾಮದ ಹತ್ತಿರ 1 ಕೋಟಿರೂ ವೆಚ್ಚದಲ್ಲಿ ಕಲ್ಲು ಹೋಳಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿದ ಕಾಮಗಾರಿ ಅಂದಾಜು ಪಟ್ಟಿ ರೀತಿ ನಡೆದಿಲ್ಲ. ವಡೇರಹಳ್ಳಿಯಿಂದ ತೆಲಿಗಿ, ಪರುಶುರಾಮನಕಟ್ಟಿ, ವಡೇರಹಳ್ಳಿಯಿಂದ ರಾಗಿಮಸಲವಾಡದವರೆಗೆ ರಸ್ತೆ ಚೆನ್ನಾಗಿದ್ದರೂ ಸಹ ಅದೇ ರಸ್ತೆಯ ಪಕ್ಕದಲ್ಲಿ ಮಣ್ಣು ಹಾಕಿ ಹೊಸಮುಖ ಮಾಡಿ ಬೋಗಸ್ ಬಿಲ್ ಮಾಡಲಾಗುತ್ತಿದೆ.
ತಾಲೂಕಿನಲ್ಲಿ ಅವಶ್ಯಕತೆ ಇರುವೆಡೆ ಕಾಮಗಾರಿ ನಡೆಸದೇ ತಮಗೆ ಬೇಕಾದ ಕಡೆ ಕಾಮಗಾರಿ ನಡೆಸಿ ಹಣ ಲೂಟಿ ಹೊಡೆಯಲಾಗುತ್ತಿದೆ. ನೆರೆ ಪರಿಹಾರದಲ್ಲಿ ಸಾಕಷ್ಟು ಭ್ರಷ್ಟಚಾರ ನಡೆದಿದೆ ಎಂದು ಆಪಾದಿಸಿದರು.
ಸಂಘಟನೆ ಮುಖಂಡರಾದ ಸಂದೇರ ಪರುಶುರಾಮ, ಮತ್ತಿಹಳ್ಳಿ ಓ.ಕೊಟ್ರೇಶ್, ಹುಲಿಕಟ್ಟಿ ಮೈಲಪ್ಪ, ದಾದಾಪುರ ಭರ್ಮಪ್ಪ, ಮೈದೂರು ಬಾಲಗಂಗಾಧರ, ಹಾರಕನಾಳು ಮೈಲಪ್ಪ, ಅಲಗಿಲವಾಡ ದೇವೇಂದ್ರಪ್ಪ, ಪೃಥ್ವೇಶ್ವರ ದುರುಗೇಶ್, ನೀಲುವಂಜಿ ತಿರುಕಪ್ಪ ಸುದ್ದಿಗೋಷ್ಠಿಯಲ್ಲಿದ್ದರು.