Advertisement

ಹರಪನಹಳ್ಳಿಗೆ ಶೈಕ್ಷಣಿಕವಾಗಿ ಪ್ರಥಮ ಸ್ಥಾನ

07:45 PM Nov 17, 2019 | Naveen |

ಹರಪನಹಳ್ಳಿ: ಗುಲ್ಬರ್ಗಾ ವಿಭಾಗದಲ್ಲಿ ಶೈಕ್ಷಣಿಕವಾಗಿ ಹರಪನಹಳ್ಳಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.

Advertisement

ಪಟ್ಟಣದ ರಾಜಸೋಮಶೇಖರನಾಯಕ ಹಿರಿಯ ಪ್ರಾಥಮಿಕ ಶಾಲೆ ಅವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಾ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ಕ್ಕೆ ನೂರು ಅಂಕ ಪಡೆಯುವ ಶಾಲೆಗಳ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 150 ಹೊಸ ಕೊಠಡಿ ನಿರ್ಮಾಣದ ಹಂತದಲ್ಲಿವೆ. ಇನ್ನೂ ಹೊಸ ಕೊಠಡಿಗಳ ನಿರ್ಮಾಣದ ಚಿಂತನೆಯಲ್ಲಿದ್ದು, ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡಬೇಕು. ಮಕ್ಕಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮವಾಗಿ ಓದುವ ಛಲ ಬರಬೇಕು ಎಂದರು.

ಕೇರಳದಲ್ಲಿ ಅರಂಭವಾದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಹಿಂದಿನ ಅವಧಿಯಲ್ಲಿ ಯಡಿಯೂರಪ್ಪ ಅವರು ರಾಜ್ಯದಲ್ಲಿಯೂ ಕಾರ್ಯಕ್ರಮವನ್ನು ಜಾರಿಗೆ ತಂದರು. ಮಕ್ಕಳು ಬರೀ ಪಾಠಕ್ಕೆ ಸೀಮಿತವಾಗದೇ ಅವರಲ್ಲಿ ಅಡಗಿಸುವ ಸುಪ್ತ ಪ್ರತಿಭೆ ಹೊರ ತೆಗೆಯಲು ಪ್ರತಿಭಾ ಕಾರಂಜಿ ಸಹಕಾರಿಯಾಗಿದೆ. ಕ್ರೀಡೆ, ಚಿತ್ರಕಲೆ, ಗಾಯನ, ಭಾಷಣ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಕಾರ್ಯಕ್ರಮಗಳ ಮೂಲಕ ಪ್ರತಿಭಾವಂತರು ಹೊರ ಬರುತ್ತಿದ್ದಾರೆ. ಶಿಕ್ಷಕರು ಕೇವಲ ಪಾಠಕ್ಕೆ ಅದ್ಯತೆ ನೀಡದೇ ಪ್ರತಿ ಶನಿವಾರ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಜಿ.ಪಂ ಸದಸ್ಯೆ ಕೆ.ಅರ್‌.ಜಯಶೀಲಾ ಮಾತನಾಡಿ, ಪ್ರತಿಭಾ ಕಾರಂಜಿ ಕ್ಲಸ್ಟರ್‌ ಮಟ್ಟಕ್ಕೆ ಹೆಚ್ಚಿನ ಅನುದಾನ ಕೊರತೆಯಿದೆ. ಶಿಕ್ಷಕರ ಪುಸ್ತಕಕ್ಕೆ ಸೀಮಿತವಾಗದೇ ಮಕ್ಕಳಲ್ಲಿನ ಪ್ರತಿಭೆ ಹೊರ ತೆಗೆಯುವ ಕಾರ್ಯ ಶ್ಲಾಘನೀಯ. ದಾವಣಗೆರೆ ಜಿಲ್ಲೆಯಿಂದ ಬಿಡುಗಡೆ ಹೊಂದಿದ ಮೇಲೆ ಹರಪನಹಳ್ಳಿ ಶಿಕ್ಷಣದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ. ಜಿಲ್ಲೆಯಲ್ಲಿ ಶಿಕ್ಷಣ, ಕ್ರೀಡೆ ಸೇರಿದಂತೆ ಎಲ್ಲ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿ ಏರಬೇಕು ಎಂದರು.

Advertisement

ಅಧ್ಯಕ್ಷತೆವಹಿಸಿದ್ದ ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿ, ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅದು ಯಾರ ಸ್ವತ್ತಲ್ಲ, ಮಕ್ಕಳಿಗೆ ಕೇವಲ ಪಾಠಕ್ಕೆ ಒತ್ತು ಕೊಡದೆ ಅವರ ಪ್ರತಿಭೆ ಅನಾವರಣಕ್ಕೆ ಪೋಷಕರು ಪ್ರೋತ್ಸಾಹ ಕೊಡಬೇಕು ಎಂದರು. ಜಿ.ಪಂ ಸದಸ್ಯ ಉತ್ತಂಗಿ ಮಂಜುನಾಥ ಮಾತನಾಡಿದರು. ತಾಪಂ ಉಪಾಧ್ಯಕ್ಷ ಎಲ್‌.ಮಂಜ್ಯನಾಯ್ಕ, ತಾ.ಪಂ ಸದಸ್ಯ ನಾಗರಾಜ್‌, ಜಿ.ಪದ್ಮಲತಾ, ಎಂ.ಕೆ.ಜಾವೀದ್‌, ಕೆ. ಸಿದ್ದಲಿಂಗಗೌಡ, ಬಸವರಾಜ್‌ ಸಂಗಪ್ಪನವರ್‌, ರೇಣುಕಾಬಾಯಿ, ಬಿಇಒ ವೀರಭದ್ರಯ್ಯ, ಕೆ.ಅಂಜಿನಪ್ಪ, ಇಸ್ಮಾಯಿಲ್‌ ಯಲಿಗಾರ್‌, ಮಂಜುನಾಥ, ಹೂವಣ್ಣ, ಎಂ.ಆಂಜನೇಯ, ಬಿ.ರಾಜಶೇಖರ್‌, ಎ.ಕೆ.ಹುಚ್ಚಪ್ಪ, ಬಂಕಾಪುರ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next