ಹರಪನಹಳ್ಳಿ: ರಾಜ್ಯದಲ್ಲಿ ಉಂಟಾಗಿರುವ ನೆರೆ ಮತ್ತು ಬರವನ್ನು ಎದುರಿಸಲು ಸರ್ಕಾರ ಎಲ್ಲ ರೀತಿಯಿಂದಲೂ ಸನ್ನದ್ಧವಾಗಿದ್ದು, ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಸಿಗುವ ಭರವಸೆಯಿದೆ ಎಂದು ಶಾಸಕ ಜಿ. ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸುರತ್ತ ನೆರೆ ಸಂತ್ರಸ್ತರ ಅಹವಾಲು ಅಲಿಸಿ ಪರಿಹಾರ ನೀಡುತ್ತಿದ್ದಾರೆ. ಕ್ಷೇತ್ರದಲ್ಲಿ ನೆರೆ ಪೀಡಿತ ಪ್ರದೇಶದ ಜನರ ಜೊತೆಗೆ ನಾನಿದ್ದೇನೆ. ನೆರೆಪೀಡಿತ ಪ್ರದೇಶವಾದ ಕಡತಿ, ಹಲುವಾಗಲು, ನಿಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ ಒಟ್ಟು 800 ಹೆಕ್ಟೇರ್ ವಿವಿಧ ಬೆಳೆಗಳು ನಾಶವಾಗಿವೆ. 340 ಮನೆಗಳು ಬಿದ್ದಿದ್ದು, ತಕ್ಷಣವೇ ಪರಿಹಾರ ಕೊಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ನೆರೆ ಸಂತ್ರಸ್ತರಿಗೆ ನೆರವಾಗಲು ತಾಲೂಕಿನ ಜನರಿಗೆ ರೊಟ್ಟಿ ದೇಣಿಗೆ ನೀಡುವಂತೆ ವಿನಂತಿಸಿಕೊಳ್ಳಲಾಗಿತ್ತು. ಕೇವಲ ನಾಲ್ಕೈದು ದಿನಗಳಲ್ಲಿ ಹಳ್ಳಿಗಳಿಂದ 1 ಲಕ್ಷ ಜೋಳದ ರೊಟ್ಟಿ ಕಳುಹಿಸಿ ಕೊಟ್ಟಿದ್ದಾರೆ. ಇನ್ನೂ 50 ಸಾವಿರ ರೊಟ್ಟಿ ಬರುವ ನೀರಿಕ್ಷೆಯಿದೆ. ಜೊತೆಗೆ ಅಕ್ಕಿ, ಬಟ್ಟೆ ಕೂಡ ಕೊಡುತ್ತಿದ್ದಾರೆ. ನಾನು ವೈಯಕ್ತಿವಾಗಿ 1 ಸಾವಿರ ಸೀರೆ, ಕೊಬ್ಬರಿ ಎಣ್ಣೆ ಡಬ್ಟಾಗಳನ್ನು ಬೆಳಗಾವಿ, ಬಾಗಲಕೋಟೆ, ಕೊಡಗು ಪ್ರದೇಶದ ಸಂತ್ರಸ್ತರಿಗೆ ಕಳುಹಿಸಲು ನಿರ್ಧರಿಸಿದ್ದೇನೆ. ಜನರಲ್ಲಿ ದಾನ ಮಾಡುವ ಗುಣವಿರುವುದು ಶ್ಲಾಘನೀಯ. ದುಡಿಮೆಯಲ್ಲಿ ಶೇ. 5ರಷ್ಟು ದಾನ ಮಾಡುವ ಗುಣ ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು ಎಂದರು. ಧ್ವಜಾರೋಹಣ ನೆರವೇರಿಸಿದ ಉಪವಿಭಾಗಾಧಿಕಾರಿ ವಿ.ಕೆ. ಪ್ರಸನ್ನಕುಮಾರ್ ಮಾತನಾಡಿ, ದೇಶದ ಸಂವಿಧಾನವನ್ನು ತಾವು ಅರ್ಥೈಸಿಕೊಂಡು ಕಾನೂನಿನಡಿಯಲ್ಲಿ ಜೀವನ ನಡೆಸಿದಾಗ ಬದುಕು ಸಾರ್ಥಕವಾಗುತ್ತದೆ. ಬಡತನ, ಹಸಿವು, ನಿರುದ್ಯೋಗ ನಿರ್ಮೂಲನೆ ದೇಶದ ದೊಡ್ಡ ಪಿಡುಗಾಗಿದ್ದು, ಸ್ವಯಂ ಉದ್ಯೋಗದ ಮೂಲಕ ದೇಶದ ಅರ್ಥಿಕ ಸದೃಢತೆಗೆ ಮುನ್ನುಡಿ ಬರೆಯಬೇಕಿದೆ ಎಂದರು.
ಪುರಸಭೆ ಸದಸ್ಯ ಎಚ್.ಎಂ. ಅಶೋಕ್ 10 ಸಾವಿರ ರೂ. ಚೆಕ್‌ನ್ನು ಉಪವಿಭಾಗಾಧಿಕಾರಿಗಳ ಮೂಲಕ ನೆರೆ ಸಂತ್ರಸ್ತರಿಗೆ ನೀಡಿದರು. ಹಿರಿಯ ಸ್ವಾತಂತ್ರ ಹೋರಾಟಗಾರರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಲ್ಯಾಪಟಾಪ್, ಸೈಕಲ್ ವಿತರಿಸಲಾಯಿತು. ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ತಹಶೀಲ್ದಾರ್ ಡಾ|ನಾಗವೇಣಿ ಮಾತನಾಡಿದರು. ಜಿಪಂ ಸದಸ್ಯೆ ಆರುಂಡಿ ಸುವರ್ಣಮ್ಮ, ಡಿ. ಸಿದ್ದಪ್ಪ, ಉತ್ತಂಗಿ ಮಂಜುನಾಥ್, ತಾಪಂ ಉಪಾಧ್ಯಕ್ಷ ಎಲ್. ಮಂಜ್ಯಾನಾಯ್ಕ, ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐ ಕೆ.ಕುಮಾರ್, ಬಿಇಒ ಎಂ.ಮಂಜುನಾಥ್, ಪಿಎಸ್‌ಐ ಶ್ರೀಧರ್, ಪುರಸಭೆ ಮುಖ್ಯಾಧಿಕಾರಿ ಬಿ.ಆರ್. ನಾಗರಾಜ್‌ನಾಯ್ಕ, ಇಒ ಮಮತ ಹೊಸಗೌಡರ್, ಎಚ್.ಎಂ. ವೀರಭದ್ರಯ್ಯ, ಎಸ್.ಜಾಕೀರ್ ಸರ್ಕಾವಸ್, ಸತ್ತೂರ್ ಹಾಲೇಶ್, ಎಂ.ಪಿ.ನಾಯ್ಕ, ಸಣ್ಣಹಾಲಪ್ಪ, ಆರ್.ಲೋಕೇಶ್ ಇತರರು ಉಪಸ್ಥಿತರಿದ್ದರು.