ಹರಪನಹಳ್ಳಿ: ತಾಲೂಕಿನಾದ್ಯಂತ ಸೋಮವಾರ ಸಂಜೆ ಮತ್ತು ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಭತ್ತ, ಈರುಳ್ಳಿ ಸೇರಿದಂತೆ ನೂರಾರು ಎಕರೆ ಬೆಳೆ ಜಲಾವೃತಗೊಂಡಿವೆ.
ಸಿಡಿಲು ಬಡಿದು 1 ಆಕಳು, 2 ಕುರಿಗಳು ಬಲಿಯಾಗಿವೆ. ಹಲವು ಕೆರೆಗಳು ಕೋಡಿ ಬಿದ್ದ ಹರಿಯುತ್ತಿದ್ದು, 200ಕ್ಕೂ ಹೆಚ್ಚು ಮನೆಗಳು ಧರೆಗುರುಳಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೊಚ್ಚಿ ಹೋದ ಬೆಳೆ: ಯಡಿಹಳ್ಳಿ ಗ್ರಾಮದಲ್ಲಿ 2, ದ್ಯಾಪನಾಯಕನಹಳ್ಳಿ-2, ಬೆಣ್ಣೆಹಳ್ಳಿ ಗ್ರಾಮದ 4 ಮನೆಗಳಿಗೆ ನೀರು ನುಗ್ಗಿ ಆಹಾರ ಧಾನ್ಯಗಳೆಲ್ಲಾ ನೀರು ಪಾಲಾಗಿವೆ. ಚಿಗಟೇರಿ ಹೋಬಳಿಯಲ್ಲಿ ಅತೀ ಹೆಚ್ಚು ಈರುಳ್ಳಿ ಬೆಳೆ ನೀರು ಪಾಲಾಗಿದೆ. ಲೋಕೇಶ್ವರ ಗ್ರಾಮದಲ್ಲಿ ಈಶಪ್ಪ ಎಂಬುವವರ ಈರುಳ್ಳಿ ಬೆಳೆ ಹಗರಿ ಹಳ್ಳದ ನೀರಿಗೆ ಕೊಚ್ಚಿ ಹೋಗಿದೆ. ತೆಲಿಗಿ, ಚಿಗಟೇರಿ, ಹರಪನಹಳ್ಳಿ ಕಸಬಾ ಹೋಬಳಿಯಲ್ಲಿ ಈರುಳ್ಳಿ-66 ಹೆಕ್ಟೇರ್ ಮತ್ತು ಟಮೋಟೊ-20 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಧರೆಗುರುಳಿದ ಮನೆಗಳು: ಉಚ್ಚಂಗಿದುರ್ಗ-2, ತೌವಡೂರು-5, ಚಟ್ನಿಹಳ್ಳಿ-3, ಮಾದಿಹಳ್ಳಿ-2, ನೀಲಗುಂದ-13, ಬಾಗಳಿ-2, ಶೃಂಗಾರದೋಟ-2, ಅರೇಬಸಾಪುರ-5, ಕೂಲಹಳ್ಳಿ-5, ಮಾಡ್ಲಿಗೇರಿ-12, ಹಿರೇಮೇಗಳಗೆರೆ-2, ಪುಣಬಗಟ್ಟ-1, ಸಾಸ್ವಿಹಳ್ಳಿ-4, ನಂದಿಬೇವೂರು-6, ಮತ್ತಿಹಳ್ಳಿ-30, ಬೆಣ್ಣೆಹಳ್ಳಿ-40, ಕಣವಿಹಳ್ಳಿ-2, ಕೊಂಗನಹೊಸೂರು-2, ನಂದಿಬೇವೂರು ತಾಂಡ-3, ಮೈದೂರು-23, ಚಿಗಟೇರಿ-12, ಮುತ್ತಿಗಿ-2, ನಿಲುವಂಜಿ-2, ಕುಮಾರನಹಳ್ಳಿ-5, ಬಸಾಪುರ ತಾಂಡಾ-1, ಹಿಕ್ಕೀಂಗೆರೆ-3, ಕನಕನಬಸಾಪುರ-2, ದ್ಯಾಪನಾಯಕನಹಳ್ಳಿ-2, ಯಡಿಹಳ್ಳಿ-6, ಬಾಪೂಜಿನಗರ-4, ಹರಪನಹಳ್ಳಿ ಕಸಾಬಾ-6, ತೆಲಿಗಿ-16, ಹಳ್ಳಿಕೆರೆ-5, ಸಿಂಗ್ರಿಹಳ್ಳಿ-1 ಸೇರಿ ಒಟ್ಟು 248ಕ್ಕೂ ಮನೆಗಳು ಭಾಗಶಃ ಹಾನಿಯಾಗಿವೆ.
ರಸ್ತೆ ಸಂಪರ್ಕ ಕಡಿತ: ಹುಲಿಕಟ್ಟಿ, ಬೆಂಡಿಗೇರಿ ಸಣ್ಣತಾಂಡಾ, ಹಗರಿಹಳ್ಳ, ಅಲಗಿಲವಾಡ ಸೇರಿದಂತೆ ಅನೇಕ ಕೆರೆಗಳು ಕೋಡಿ ಬಿದ್ದು ಮೈದುಂಬಿ ಹರಿಯುತ್ತಿವೆ. ಕಣವಿ ಗ್ರಾಮದಿಂದ ಹಲುವಾಗಲು, ಇಟ್ಟಿಗುಡಿ ಗ್ರಾಮದಿಂದ ಕುಂಚೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿದೆ. ಹಗರಿಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಮತ್ತಿಹಳ್ಳಿ, ಆಲಹಳ್ಳಿ, ಪುಣ್ಯನಗರ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಪೋತಲಕಟ್ಟೆ ಗ್ರಾಮದಿಂದ ಹಿರೇಮೆಗಳಗೆರೆ ತಲುಪಿಸುವ ಸೇತುವೆ ಮುಳುಗಡೆಯಾಗಿದ್ದರಿಂದ ಹೊಲ, ಗದ್ದೆಗಳಿಗೆ ತೆರಳುವ ರೈತರು ಪರದಾಡುತ್ತಿದ್ದರು. ಅರೇಬಸಾಪುರ-ಪುಟಗನಾಳ್
ರಸ್ತೆಯು ಸಂಪೂರ್ಣವಾಗಿ ಜಾಲಾವೃತವಾಗಿದ್ದು, ವಾಹನ ಸವಾರರು ಸಮೀಪದ ರಸ್ತೆಯನ್ನು ಬಿಟ್ಟು, 10ಕಿಮೀ ದೂರದ ರಸ್ತೆಯಲ್ಲಿ ಸಾಗುವಂತ ಅನಿವಾರ್ಯತೆ ಎದುರಿಸಿದರು.
ಹಿರೆಮೇಗಳಗೇರೆ, ವಡ್ಡಿನಹಳ್ಳಿ, ಚಿಕ್ಕಮೇಗಳಗೆರೆ, ಅರೆಬಸಾಪುರ, ಶ್ರೀಕಂಠಪುರ, ಜಂಬುಲಿಂಗನಹಳ್ಳಿ, ಮಳೆಯಿಂದ ಸುಮಾರು 400 ಹೆಕ್ಟೇರ್ ಕಾಟವು ಹಂತದಲ್ಲಿದ್ದ ಭತ್ತದ ಬೆಳೆ ಹಾನಿಯಾಗಿದೆ. ಗೋಕಟ್ಟೆ, ಚೆಕ್ ಡ್ಯಾಂಗಳು, ಕೃಷಿ ಹೊಂಡಗಳು ಭರ್ತಿಯಾಗಿದ್ದು, ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಒಳಪಟ್ಟ ಹಿರೇಮೆಗಳಗೆರೆ ಕೆರೆಗೆ ಕಾಲುವೆ ಮೂಲಕ ನೀರು ಹರಿದುಬರುತ್ತಿದೆ. ಕೆರೆಯ ಗೇಟ್ ಮೂಲಕ ನೀರನ್ನು ಹೊರಕ್ಕೆ ಬಿಡಲಾಗಿದೆ. ಕೆರೆಯ ಕೋಡಿ ಬಿದ್ದು ನೀರು ಉಕ್ಕಿ ಹರಿದಿವೆ. ಕೆರೆ ದಡದಲ್ಲಿ ಬಳಿ ಸೊಗಸಾಗಿ ಬೆಳೆದು ಕಟಾವಿನ ಹಂತದಲ್ಲಿದ್ದ ಭತ್ತದ ಬೆಳೆ ನೆಲಕಚ್ಚಿವೆ. ನಿರಂತರ ಹೊರ ಹರಿವು ಇರುವುದರಿಂದ ಕೆಲವೆಡೆ ಜಲಾವೃತವಾಗಿ ಭತ್ತದ ಬೆಳೆ ಕಣ್ಮರೆಯಾಗಿ ಕರೆಯ ಹಾಗೆ ಗೋಚರಿಸುತ್ತಿದೆ.
ಉಚ್ಚಂಗಿದುರ್ಗ ಗ್ರಾಮದ ಹೊಲಗಳಲ್ಲಿ ಸಂಗ್ರಹಿಸಲಾಗಿದ್ದ ಜೋಳದ ಬಣಿವೆಗೆ ನೀರು ನುಗ್ಗಿ ಹಾನಿಯಾಗಿದೆ. ಈಚೆಗೆ ಜೋಳ ಕೊಯ್ಲು ಮಾಡಿ ರಾಶಿ ಮಾಡಲಾಗಿತ್ತು. ರಭಸವಾಗಿ ಸುರಿದ ಮಳೆ ನೀರು ರಾಶಿಗೆ ನುಗ್ಗಿದ್ದರಿಂದ ಕೈ ಸೇರಿದ್ದ ಜೋಳ ಬಾಯಿಗೆ ಬರದಂತೆ ಮಳೆಯ ಪಾಲಾಗಿದೆ. ಹರಪನಹಳ್ಳಿ ಪಟ್ಟಣದ ವಿವಿಧ ಬಡಾವಣೆಗಳ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ಪುರಸಭೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿ ಅನುಕೂಲ ಮಾಡಿಕೊಟ್ಟರು.