Advertisement

ಹರಪನಹಳ್ಳಿ ಜಿಲ್ಲಾ ಹೋರಾಟಕ್ಕೆ ಬೆಂಬಲ

11:46 AM Nov 17, 2019 | Naveen |

ಹರಪನಹಳ್ಳಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಶಾಸಕ ಜಿ. ಕರುಣಾಕರರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಹರಪನಹಳ್ಳಿ ಜಿಲ್ಲೆಯನ್ನಾಗಿ ಮಾಡಲು ಹೋರಾಟದ ರೂಪರೇಷೆ ತಯಾರಿಸಲು ಸರ್ವ ಪಕ್ಷದ ಸಭೆ ನಡೆಯಿತು.

Advertisement

ಸಭೆ ಅಧ್ಯಕ್ಷತೆವಹಿಸಿದ್ದ ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ಹೊಸಪೇಟೆ ಜಿಲ್ಲೆ ಮಾಡುವಂತೆ ನಿಯೋಗ ಸಿಎಂಗೆ ಮನವಿ ಕೊಟ್ಟಿದ್ದಾರೆ. ತಾಂತ್ರಿಕವಾಗಿ ಹೊಸಪೇಟೆ ಜಿಲ್ಲೆ ಮಾಡಲು ಬರಲ್ಲ. ಹಡಗಲಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು ಎಲ್ಲವೂ ಸಮೀಪದಲ್ಲಿದ್ದು ಹರಪನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳವಾಗಿದೆ. ಅಲ್ಲದೇ ಜಿಲ್ಲಾ ಕಚೇರಿಗಳನ್ನು ತೆರೆಯಲು ಸಾಕಷ್ಟು ಜಮೀನು ಕೂಡ ಇದೆ. ಹೀಗಾಗಿ ಹರಪನಹಳ್ಳಿ ಜಿಲ್ಲೆಯನ್ನಾಗಿ ಮಾಡಲು ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ಘೋಷಿಸಿದರು.

ಹರಪನಹಳ್ಳಿಯನ್ನು ಜಿಲ್ಲೆ ಮಾಡುವಂತೆ ಒತ್ತಾಯಿಸಿ ಶೀಘ್ರವೇ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡಯ್ಯಲಾಗುವುದು. ಈ ಕುರಿತು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ದಿನಾಂಕ ನಿಗದಿಗೊಳಿಸಲಾಗುವುದು. ಜಿಲ್ಲಾ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುವುದು ಬೇಡ. ನಾನು ಜನಪ್ರತಿನಿಧಿಯಾಗಿ ನನ್ನ ಕೆಲಸ ಮಾಡುತ್ತೇನೆ. ಸಿಎಂ ಬಳಿ ನಿಯೋಗ ತೆರಳಿದಾಗ ಮುಖ್ಯಮಂತ್ರಿಗಳ ಪ್ರತಿಕ್ರಿಯೆ ನೋಡಿಕೊಂಡು ಹೋರಾಟದ ಮುಂದಿನ ರೂಪರೇಷೆಗಳನ್ನು ಚರ್ಚಿಸೋಣ ಎಂದರು.

ಹೋರಾಟಗಾರರು ಶಾಸಕರು ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡಲು ಶಕ್ತಿ ಮೀರಿ ಶ್ರಮಿಸುತ್ತೇನೆ. ಜಿಲ್ಲೆಯಾದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ತಾಲೂಕು ಅಭಿವೃದ್ಧಿ ಹೊಂದಲಿದೆ. ಹೀಗಾಗಿ ಜಿಲ್ಲೆಗಾಗಿ ಸದನದ ಒಳಗೆ ಮತ್ತು ಹೊರಗೆ ಎರಡು ಕಡೆಗೂ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಎಂ. ರಾಜಶೇಖರ್‌, ಎಂ.ವಿ. ಅಂಜಿನಪ್ಪ, ಡಿ. ಅಬ್ದುಲ್‌ ರಹಿಮಾನಸಾಬ್‌ ಮಾತನಾಡಿ, ಹರಪನಹಳ್ಳಿ ಜಿಲ್ಲೆ ಆಗುವ ಎಲ್ಲ ಅರ್ಹತೆ ಹೊಂದಿದ್ದು, ಶಾಸಕರ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಕಾಂಗ್ರೆಸ್‌ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

Advertisement

ಜಿಲ್ಲಾ ಹೋರಾಟ ಸಮಿತಿಯ ಇದ್ಲಿ ರಾಮಪ್ಪ ಮಾತನಾಡಿ, ಶಾಸಕರು ಇಚ್ಛಾಶಕ್ತಿಯಿಂದ ಜಿಲ್ಲಾ ಹೋರಾಟದ ನೇತೃತ್ವವಹಿಸಿಕೊಂಡು ಸರ್ಕಾರದ ಭಾಗವಾಗಿ ಕೆಲಸ ಮಾಡಬೇಕು. ಪಶ್ಚಿಮ ತಾಲೂಕುಗಳ ಶಾಸಕರ ಸಮನ್ವಯ ಸಮಿತಿ ರಚಿಸಿಕೊಂಡು ಅವರ ಸಹಕಾರದಿಂದ ಜಿಲ್ಲೆಯನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಹೋರಾಟ ಸಮಿತಿಯ ಹೊಸಹಳ್ಳಿ ಮಲ್ಲೇಶ್‌ ಮಾತನಾಡಿ, ಶಾಸಕರಿಗೆ ತಾಲೂಕಿನ ಜನರು ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಶಾಸಕರು ಹೋರಾಟದ ನೇತೃತ್ವ ವಹಿಸಿಕೊಳ್ಳಬೇಕು. ಮುಖ್ಯಮಂತ್ರಿಗಳ ಬಳಿ ನಿಯೋಗ ಕರೆದೊಯ್ಯಬೇಕು. ಪ್ರಾಮಾಣಿಕವಾಗಿ ಇಚ್ಛಾಶಕ್ತಿಯಿಂದ ಕಲಾಪದಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂಬ ನಿರ್ಣಯವನ್ನು ಹೋರಾಟ ಸಮಿತಿ ಕೈಗೊಂಡಿರುವುದಾಗಿ ಸಭೆಗೆ ತಿಳಿಸಿದಾಗ ಚಪ್ಪಾಳೆ ಮೂಲಕ ಒಪ್ಪಿಗೆ ಸೂಚಿಸಲಾಯಿತು.

ವಕೀಲ ಗಂಗಾಧರ ಗುರುಮಠ, ಪಾಟೀಲ್‌ ಬೆಟ್ಟನಗೌಡ, ಮತ್ತಿಹಳ್ಳಿ ಅಜ್ಜಣ್ಣ, ಪ್ರೋ.ತಿಮ್ಮಪ್ಪ, ಗುಡಿಹಳ್ಳಿ ಹಾಲೇಶ್‌, ಕರವೇ ಬಸವರಾಜ್‌ ಹುಲಿಯಪ್ಪನವರ್‌, ನಿಚ್ಚವ್ಬನಹಳ್ಳಿ ಭೀಮಪ್ಪ, ಬೂದಿಹಾಳ್‌ ಸಿದ್ದೇಶ್‌, ಕೂಲಹಳ್ಳಿ ಚಿನ್ಮಯ ಸ್ವಾಮೀಜಿ ಮಾತನಾಡಿದರು. ವಿವಿಧ ಪಕ್ಷ ಮತ್ತು ಸಂಘಟನೆ ಮುಖಂಡರಾದ ಬೇಲೂರು ಅಂಜಪ್ಪ, ಎಲ್‌. ಮಂಜ್ಯನಾಯ್ಕ, ಟಿ. ವೆಂಕಟೇಶ್‌, ಚಿಕ್ಕೇರಿ ಬಸಪ್ಪ, ಎಂ.ಪಿ.ನಾಯ್ಕ, ಶಿಕಾರಿ ಬಾಲಪ್ಪ, ಪ್ರೋ.ಡಿ.ಬಿ.ಬಡಿಗೇರ, ಬಾಗಳಿ ಕೊಟ್ರೇಶಪ್ಪ, ಹೆಚ್‌. ಎಂ.ಅಶೋಕ್‌,ಯರಬಾಳು ಹನುಮಂತಪ್ಪ, ಸತ್ತೂರು ಹಾಲೇಶ್‌, ರಾಘವೇಂದ್ರಶೆಟ್ಟಿ, ಸಣ್ಣ ಹಾಲಪ್ಪ, ಟಿ.ಲೋಕೇಶ್‌, ಡಾ.ಮಲ್ಕಪ್ಪ, ಎಂ.ಟಿ.ಬಸವನಗೌಡ, ಎಸ್‌.ಪಿ.ಲಿಂಬ್ಯಾನಾಯ್ಕ, ಇಸ್ಮಾಯಿಲ್‌ ಯಲಿಗಾರ್‌, ಎಚ್‌.ಎಂ.ಜಗದೀಶ್‌, ಬಸವರಾಜ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next