Advertisement

ಜಿಲ್ಲಾ ಹೋರಾಟಕ್ಕೆ ವಿದ್ಯಾರ್ಥಿಗಳ ಬೆಂಬಲ

01:32 PM Nov 24, 2019 | |

ಹರಪನಹಳ್ಳಿ: ಹರಪನಹಳ್ಳಿ ಜಿಲ್ಲಾ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದಿದ್ದು ಶನಿವಾರ ಸಾವಿರಾರು ವಿದ್ಯಾರ್ಥಿಗಳು ಜಿಲ್ಲಾ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಪತ್ರ ಬರೆದು ಜಿಲ್ಲೆ ಘೋಷಿಸುವಂತೆ ಒತ್ತಾಯಿಸಿದರು.

Advertisement

ಪಟ್ಟಣದ ಎಸ್‌.ಯು.ಜೆ.ಎಂ ಕಾಲೇಜಿನಿಂದ ಹೊರಟ ಪ್ರತಿಭಟನಾ ಮೆರವಣಿಗೆ ಇಜಾರಿ ಶಿರಸಪ್ಪ ವೃತ್ತದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ವಾಹನಗಳನ್ನು ತಡೆಗಟ್ಟಿ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ನಂತರ ಐ.ಬಿ ವೃತ್ತದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಹಾಕಿರುವ ಟೆಂಟ್‌ ಸ್ಥಳಕ್ಕೆ ಬಂದು ಹರಪನಹಳ್ಳಿಯನ್ನು ತಕ್ಷಣವೇ ಜಿಲ್ಲೆ ಎಂದು ಘೊಷಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ 2500 ವಿದ್ಯಾರ್ಥಿಗಳು ಪತ್ರ ಬರೆದರು.

ಬಳ್ಳಾರಿ ಜಿಲ್ಲೆಯಲ್ಲಿ 11 ತಾಲೂಕುಗಳಿದ್ದು, ಹರಪನಹಳ್ಳಿ ಗಡಿ ಭಾಗದ ಗ್ರಾಮಗಳಿಗೆ 200 ಕಿ.ಮೀ ದೂರವಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ತುಂಬಾ ತೊಂದರೆಯಾಗಿದ್ದು, ಪಶ್ಚಿಮ ತಾಲೂಕುಗಳಾದ ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಹಡಗಲಿ ಸೇರಿಸಿಕೊಂಡು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹರಪನಹಳ್ಳಿ ಶಿಕ್ಷಣ ಕಾಶಿಯಾಗಿದ್ದು, ಸುತ್ತಮುತ್ತಲಿನ ತಾಲೂಕುಗಳ ವಿದ್ಯಾರ್ಥಿಗಳು ಹರಪನಹಳ್ಳಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುತ್ತಾರೆ. ಆದರೆ ವಿವಿಧ ಕಚೇರಿ ಕೆಲಸಗಳಿಗೆ ಬಳ್ಳಾರಿಗೆ ಅಲೆಯುವಂತಾಗಿದೆ. ಸುತ್ತ ತಾಲೂಕುಗಳು ಯಾವಾಗಲೂ ಹರಪನಹಳ್ಳಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿವೆ ಹೀಗಾಗಿ ಹರಪನಹಳ್ಳಿ ಜಿಲ್ಲೆಯಾಗಲು ಸರ್ವ ರೀತಿಯಿಂದ ಸೂಕ್ತವಾಗಿದೆ ಎಂದರು.

ಹರಪನಹಳ್ಳಿ ಜಿಲ್ಲಾ ಕೇಂದ್ರವಾದರೆ ಅದಕ್ಕೆ ಒಳಪಡುವ ತಾಲೂಕು ಕೇಂದ್ರಗಳು ಕೇವಲ 25 ರಿಂದ 40 ಕಿ.ಮೀ ದೂರದಲ್ಲಿವೆ. ಹರಪನಹಳ್ಳಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಬೇಕಾಗುವ ಎಲ್ಲ ಮೂಲಸೌಕರ್ಯಗಳ ಅನುಕೂಲವಿದೆ. 1953ರಲ್ಲಿಯೇ ಬಳ್ಳಾರಿ ಹೊರತು ಪಡಿಸಿದರೆ ಅತ್ಯಂತ ಶೈಕ್ಷಣಿಕವಾಗಿ ಮುಂದುವರೆದಿದ್ದ ಹರಪನಹಳ್ಳಿ ಎಂದೋ ಜಿಲ್ಲಾ ಕೇಂದ್ರವಾಗಬೇಕಿತ್ತು ಸಂಘಟನೆ ಹಾಗೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ತಡವಾಗಿದೆ. ಹರಪನಹಳ್ಳಿ ಎಲ್ಲ ದೃಷ್ಟಿಯಿಂದಲೂ ಜಿಲ್ಲಾ ಕೇಂದ್ರಕ್ಕೆ ಅರ್ಹತೆ ಹೊಂದಿದೆ. ಆದ್ದರಿಂದ ಜಿಲ್ಲೆ ಎಂದು  ಘೋಷಿಸಿ ಎಂದು ಒತ್ತಾಯಿಸಿದರು.

Advertisement

ಹರಪನಹಳ್ಳಿ ಜಿಲ್ಲಾ ಹೋರಾಟಕ್ಕೆ ಬೆಂಬಲಿಸಿ ವಿದ್ಯಾರ್ಥಿ ನಾಯಕರಾದ ಆರ್‌.ಪಿ. ವಿಜಯಕುಮಾರ್‌, ಪೂಜಾಬಾಯಿ, ಸುಪ್ರಿತ, ಪಲ್ಲವಿ, ಗೋಪಿನಾಯ್ಕ,
ರಂಗಸ್ವಾಮಿ, ವರುಣ, ಸಚಿನ್‌, ಎಸ್‌.ಕವಿತ, ಯು.ರಾಜೇಶ್ವರಿ, ಉಮೇಶ್‌, ಕೀರ್ತಿ, ಪೂಜಾ, ಪ್ರದೀಪನಾಯ್ಕ ಜಿಲ್ಲಾ ಹೋರಾಟ ಸಮಿತಿಯ ಮುಖಂಡರಾದ ಇದ್ಲಿ ರಾಮಪ್ಪ, ಶಿಕಾರಿ ಬಾಲಪ್ಪ, ನಿಚ್ಚವನಹಳ್ಳಿ ಭೀಮಪ್ಪ, ಕಬ್ಬಳ್ಳಿ ಮೈಲಪ್ಪ, ಮಹಬೂಬ್‌ ಭಾಷ, ಸಣ್ಣ ಹಾಲಸ್ವಾಮಿ, ಗಿರಿರಾಜ, ಕುಂಚೂರು ಮಾಬೂಸಾಬ್‌, ಶೃಂಗಾರದೋಟ ಬಸವರಾಜ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next