Advertisement

ನಿಮ್ಮೊಂದಿಗೆ ನಾವಿದ್ದೇವೆ; ಧೃತಿಗೆಡಬೇಡಿ

11:17 AM Aug 11, 2019 | Team Udayavani |

ಹರಪನಹಳ್ಳಿ; ತಾಲೂಕಿನ ತುಂಗಭದ್ರಾ ನದಿಪಾತ್ರದ ಹಳ್ಳಿಗಳಾದ ಹಲುವಾಗಲು, ನಿಟ್ಟೂರು, ಗರ್ಭಗುಡಿ ಸೇರಿದಂತೆ ಪ್ರವಾಹ ಪೀಡಿತ ಪ್ರದೇಶಕ್ಕೆ ಶನಿವಾರ ಶಾಸಕ ಜಿ.ಕರುಣಾಕರರೆಡ್ಡಿ, ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ.ಬಾಬು, ಜಿ.ಪಂ. ಸಿ.ಇಒ ಕೆ.ನಿತೀಶ್‌ಕುಮಾರ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಭಾರತಿ ತಿಮ್ಮರೆಡ್ಡಿ ಸೇರಿದಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಒಳಗೊಂಡ ತಂಡ ಭೇಟಿ ನೀಡಿ ನೆರೆಸಂತ್ರಸ್ತರಿಗೆ ಸಂತ್ವಾನ ಹೇಳಿದರು.

Advertisement

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಶಾಸಕ ಜಿ.ಕರುಣಾಕರರೆಡ್ಡಿ ಮಾತನಾಡಿ, ನದಿ ಪಾತ್ರದ ಒಟ್ಟು 9 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗಿದ್ದು, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್‌ ಇಲಾಖೆ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮ ಪಂಚಾಯ್ತಿಯಲ್ಲಿಯೇ ವಾಸ್ತವ್ಯ ಹೂಡಿ ಗ್ರಾಮಗಳ ಪರಿಸ್ಥಿತಿ ಅವಲೋಕಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗಂಜಿ ಕೇಂದ್ರಗಳಲ್ಲಿ ನೆರ ಸಂತ್ರಸ್ತರಿಗೆ ಶುದ್ಧ ನೀರಿನಲ್ಲಿ ಅಡುಗೆ ತಯಾರಿಸಬೇಕು ಮತ್ತು ಕುಡಿಯಲು ಶುದ್ಧ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಹಲುವಾಗಲು, ನಿಟ್ಟೂರು, ಕಡತಿ ಮೂರು ಪಂಚಾಯ್ತಿಗಳಿಗೆ ಮೂರು ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ವೀಕ್ಷಣೆಗೆ ನಿಯೋಜಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾನಿಗೊಳಗಾದ ಜಮೀನುಗಳ ಬಗ್ಗೆ ಮಾಹಿತಿ ಪಡೆದು ಹಾನಿ ಕುರಿತು ವರದಿ ಸಿದ್ಧಪಡಿಸಬೇಕು. ಪಶು ಇಲಾಖೆಯ ವೈದ್ಯರು ಜಾನುವಾರುಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ಹಲುವಾಗಲು ಗ್ರಾಮದ ಆರೋಗ್ಯ ಕೇಂದ್ರದ ವಾಹನವನ್ನು ತುರ್ತು ಸೇವೆಗಾಗಿ ನೇರೆ ಪೀಡಿತ ಹಳ್ಳಿಗಳಿಗೆ ಮೀಸಲಿಡಲಾಗಿದೆ ಎಂದರು.

ಇದಕ್ಕೂ ಮೊದಲು ಶಾಸಕರು ಮತ್ತು ಅಧಿಕಾರಿಗಳ ಬಳಿ ನೆರೆಸಂತ್ರಸ್ತರು, ಜನರು ಮನೆ ಇಲ್ಲ, ಸಾಲ ಮಾಡಿ ಬಿತ್ತನೆ ಮಾಡಿದ್ದ ಹೊಲ, ಗದ್ದೆಗಳೆಲ್ಲಾ ನೀರು ಪಾಲಾಗಿವೆ. ನಾವು ಬದುಕುತ್ತೀವೋ, ಇಲ್ಲವೋ ಎಂಬಂತಹ ಪರಿಸ್ಥಿತಿ ಬಂದಿದೆ. ನದಿ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಮ್ಮನ್ನು ನೀವೇ ಕಾಪಾಡಬೇಕು ಎಂದು ಮನವಿ ಮಾಡಿದರು. ಹಾನಿಯಾಗಿರುವ ಪ್ರತಿಯೊಬ್ಬ ರೈತರಿಗೂ ಸರ್ಕಾರದ ಸಹಾಯ ಧನ ನೀಡುತ್ತೇವೆ. ಯಾರು ಆಂತಕಪಡುವ ಅಗತ್ಯವಿಲ್ಲ, ನಿಮ್ಮೊಂದಿಗೆ ನಾವೀದ್ದೇವೆ ಎಂದು ರೈತರಿಗೆ ಶಾಸಕರು, ಅಧಿಕಾರಿಗಳು ಧೈರ್ಯ ತುಂಬಿದರು.

ಜಿ.ಪಂ ಸದಸ್ಯೆ ಕೆ.ಆರ್‌.ಜಯಶೀಲ, ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್‌, ತಹಶೀಲ್ದಾರ್‌ ಡಾ.ನಾಗವೇಣಿ, ತಾ.ಪಂ ಇ.ಒ ಮಮತಾ ಹೊಸಗೌಡರ್‌, ಡಿವೈಎಸ್ಪಿ ನಾಗೇಶ್‌ ಐತಾಳ್‌, ಸಿಪಿಐ ಕೆ.ಕುಮಾರ್‌, ತಾ.ಪಂ ಉಪಾಧ್ಯಕ್ಷ ಮಂಜ್ಯನಾಯ್ಕ, ತಾಲೂಕು ಬಿಜೆಪಿ ಅಧ್ಯಕ್ಷ ಸತ್ತೂರ್‌ ಹಾಲೇಶ್‌, ಮುಖಂಡರಾದ ಎಂ.ಪಿ.ನಾಯ್ಕ, ಆರ್‌.ಲೋಕೇಶ್‌, ಸಣ್ಣ ಹಾಲಪ್ಪ, ದ್ಯಾಮಜ್ಜಿ ರೊಕ್ಕಪ್ಪ, ಎಂ.ಕೆ.ಜಾವೀದ್‌, ಬಿ.ಮಾಹಬೂಬ್‌ಸಾಬ್‌, ಬಾಗಳಿ ಕೊಟ್ರಪ್ಪ, ರಾಘವೇಂದ್ರಶೆಟ್ಟಿ, ಎಸ್‌.ಪಿ.ಲಿಂಬ್ಯಾನಾಯ್ಕ, ಎಂ.ಮಲ್ಲೇಶ್‌, ಪಿಎಸ್‌ಐ ಶ್ರೀಧರ್‌, ಪ್ರಕಾಶ್‌, ಅಧಿಕಾರಿಗಳಾದ ಭೀಮಾನಾಯ್ಕ, ಆನಂದ ಡೋಳ್ಳಿನ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next