ಹರಪನಹಳ್ಳಿ: ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುವಂತೆ ಆಗ್ರಹಿಸಿ ಎಲ್ಲೆಡೆ ಪ್ರತಿಭಟನೆ ನಡೆಸುವುದು ಮಾಮೂಲು. ಆದರೆ ಇಲ್ಲಿ ವಿವಿಧ ಇಲಾಖೆ ಕಾಮಗಾರಿಗಳಲ್ಲಿ ಜನರಿಗೆ ಕೆಲಸ ಕೊಡಲು ಅಧಿಕಾರಿಗಳು ಸಿದ್ಧರಿದ್ದು, ಮನೆ ಮೆನೆಗೆ ತೆರಳಿ ಜಾಗೃತಿ ಮೂಡಿಸಿದರೂ ಕೂಡ ಕೂಲಿ ಕಾರ್ಮಿಕರು ಮಾತ್ರ ಕೆಲಸಕ್ಕೆ ಬರುತ್ತಿಲ್ಲ.
ತಾಲೂಕಿನ ಯಡಿಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ 2019-20ನೇ ಸಾಲಿನ ನರೇಗ ಯೋಜನೆಯಡಿಯಲ್ಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ 1-1-2020ರಂದು ಸಾಮಾಜಿಕ ವಲಯ ಅರಣ್ಯ ಇಲಾಖೆಗೆ ಪತ್ರ ಬರೆದು ಕೋರಿದ್ದರು. ಇಲಾಖೆ ಮಾರ್ಗಸೂಚಿ ಪ್ರಕಾರ ಕೆಲಸ ನೀಡುವುದಾಗಿ ಅರಣ್ಯ ಅಧಿಕಾರಿಗಳು 7-1-2020ರಂದು ಮರು ಪತ್ರ ಬರೆದು ಮಾಹಿತಿ ನೀಡಿದ್ದರು. ನಂತರ 13-1-2020ರಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮನೆ ಮನೆಗೆ ತೆರಳಿ ಕೆಲಸಕ್ಕೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು.
ಉದ್ಯೋಗಕ್ಕಾಗಿ ನಮೂನೆ-6ರಲ್ಲಿ ಕೂಲಿ ಬೇಡಿಕೆ ಸಲ್ಲಿಸಿದ್ದ ಕಾರ್ಮಿಕರು ಕೂಡ ಇದಕ್ಕೆ ಒಪ್ಪಿಕೊಂಡಿದ್ದರು. ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಸುವ ಸಲುವಾಗಿ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಅಳಗಂಚಿಕೇರಿ ಗ್ರಾಮದಿಂದ ದಾವಣಗೆರೆ ರಸ್ತೆವರೆಗೆ ಸುಮಾರು 3 ಕಿಮೀ ರಸ್ತೆಯ ಬದಿ ನೆಡುತೋಪು ನಿರ್ಮಾಣ ಮಾಡಲು ಮುಂಗಡ ಗುಂಡಿ ತೆಗೆಯುವ ಕಾಮಗಾರಿ ಕೆಲಸಕ್ಕೆ 15-1-20ರಂದು ಕೆಲಸಕ್ಕೆ ಕೂಲಿಕಾರರು ಹಾಜರಾದರು. ಆದರೆ ಗುಂಡಿ ಅಳತೆ 1 ಮೀ. ಉದ್ದ, 1ಮೀ. ಅಗಲ, 1ಮೀ ಎತ್ತರ ಅಳತೆಯ ಗುಂಡಿಗಳನ್ನು ತೆಗೆಯುವಂತೆ ತಿಳಿಸಿದಾಗ ಈ ಅಳತೆಯ ಗುಂಡಿಗಳನ್ನು ತೆಗೆಯಲು ಸಾಧ್ಯವಿಲ್ಲ ಎಂದು ನಿರಾಕರಿಸಿ ಕೆಲಸ ನಿರ್ವಹಿಸದೇ ಹಿಂದಿರುಗಿದ್ದಾರೆ.
ಕಾರ್ಮಿಕರು ಕೆಲಸ ಮಾಡದೇ ವಾಪಾಸ್ ಹೋಗಿರುವ ಕುರಿತು ಸಾಮಾಜಿಕ ವಲಯ ಅರಣ್ಯಾ ಧಿಕಾರಿಗಳು 29-1-2020ರಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಆದರೆ ಇದೊಂದೇ ಪಂಚಾಯ್ತಿ ಅಲ್ಲ, ತಾಲೂಕಿನ 37 ಗ್ರಾಮ ಪಂಚಾಯ್ತಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರ ಬರೆದು ಕೆಲಸ ನೀಡಲು ಸಿದ್ಧರಿದ್ದರೂ ಯಾರು ಕೆಲಸ ಕೇಳಿ ಹೆಸರು ನೋಂದಾಯಿಸಿಕೊಳ್ಳುತ್ತಿಲ್ಲ. ಈಗ ಗುಂಡಿಗಳನ್ನು ತೆಗೆಸಿದರೆ ಮುಂಗಾರಿನಲ್ಲಿ ಸುರಿಯುವ ಮಳೆ ನೀರನ್ನು ಗುಂಡಿಗಳು ಇಂಗಿಕೊಂಡು ಹಸಿಯಾಗಿರುವುದರಿಂದ ಸಸಿಗಳನ್ನು ಹಾಕಲು ಅನುಕೂಲವಾಗುತ್ತದೆ. ಆದರೆ ಕೂಲಿ ಕಾರ್ಮಿಕರು ಮಾತ್ರ ಸಿಗುತ್ತಿಲ್ಲ ಎಂಬುವುದು ಅರಣ್ಯ ಇಲಾಖೆ ಅಧಿಕಾರಿಗಳ ಅಳಲು.
ಯಡಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಉದ್ಯೋಗಕ್ಕಾಗಿ ಹೆಸರು ನೋಂದಾಯಿಸಿಕೊಳ್ಳುವಂತೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಲಿ ಕಾರ್ಮಿಕರಿಗೆ ಫಾರಂಗಳನ್ನು ವಿತರಿಸಿ ಜಾಗೃತಿ ಮೂಡಿಸಿದ್ದರೂ ಸಹ ಕಾರ್ಮಿಕ ಕೆಲಸಕ್ಕೆ ಬರುತ್ತಿಲ್ಲ.
ಓರ್ವ ಕೂಲಿ ಕಾರ್ಮಿಕನಿಗೆ ದಿನಕ್ಕೆ 249ರೂ ಕೂಲಿ ಹಣ ನೇರವಾಗಿ ಕಾರ್ಮಿಕರ ಖಾತೆಗೆ ಜಮೆ ಮಾಡಲಾಗುತ್ತಿದೆ. ನಂಜುಂಡ ವರದಿ ಅನ್ವಯ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿರುವ ಹರಪನಹಳ್ಳಿಯಲ್ಲಿ ಕೆಲಸ ಅರಸಿ ಜನರು ಗುಳೆ ಹೋಗುತ್ತಿದ್ದಾರೆ. ಆದರೂ ಜನರು ಕೆಲಸಕ್ಕೆ ಬಾರದಿರುವುದು ಒಂದೆಡೆ ಅಶ್ಚರ್ಯವೆನಿಸಿದರೂ ಯೋಜನೆ ಬಗ್ಗೆ ಅಧಿಕಾರಿಗಳು ಎಷ್ಟರಮಟ್ಟಿಗೆ ಜಾಗೃತಿ ಮೂಡಿಸಿದ್ದಾರೆ ಎಂಬ ಅನುಮಾನವೂ ಕಾಡುತ್ತದೆ.
ತಾಲೂಕಿನ 37 ಗ್ರಾಪಂಗಳಿಗೂ ಪತ್ರ ಬರೆದು ಕಾರ್ಮಿಕರನ್ನು ಕೆಲಸಕ್ಕೆ ನೀಡುವಂತೆ ಕೋರಿದ್ದೇವೆ. ಒಂದೆರಡು ಪಂಚಾಯ್ತಿ ವತಿಯಿಂದ ಮಾಹಿತಿ ಪಡೆದುಕೊಂಡಿರುವುದನ್ನು ಹೊರತುಪಡಿಸಿದರೆ ಉಳಿದ ಯಾರು ಸ್ಪಂದಿಸಿಲ್ಲ. ಯಡಿಹಳ್ಳಿ ಪಂಚಾಯ್ತಿ ಕೂಲಿ ಕಾರ್ಮಿಕರು ಕೆಲಸ ನಿರಾಕರಿಸಿರುವುದನ್ನು ಇಒ ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಇಲಾಖೆ ಸಿಬ್ಬಂದಿಗಳು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರೂ ಕೂಲಿಕಾರರು ಕೆಲಸಕ್ಕೆ ಬಾರದಿರುವುದು ಅಚ್ಚರಿ ತಂದಿದೆ.
ಬಿ.ಕಾಂತೇಶ್, ಸಾಮಾಜಿಕ ವಲಯ
ಅರಣ್ಯಾಧಿಕಾರಿ
ಖಾತ್ರಿಯಡಿ ತಾಲೂಕಿನ 37 ಗ್ರಾಪಂಗಳ ಪೈಕಿ 12 ಗ್ರಾಪಂ ವ್ಯಾಪ್ತಿಯ ವಿವಿಧ ಕಾಮಗಾರಿಗಳಲ್ಲಿ ಕೂಲಿ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಕಾಮಗಾರಿಗಳಿಗೆ ಏಕೆ ಕಾರ್ಮಿಕರು ಬರುತ್ತಿಲ್ಲ ಎಂಬುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳು ನಮ್ಮ ಬಳಿ ಬಂದು ಚರ್ಚೆ ನಡೆಸಿದಲ್ಲಿ ಅರಣ್ಯ ಇಲಾಖೆ ಕಾಮಗಾರಿಗಳಿಗೆ ಕಾರ್ಮಿಕರನ್ನು ಒದಗಿಸುವಂತೆ ಪಿಡಿಒಗಳಿಗೆ ಸೂಚನೆ ನೀಡಲಾಗುವುದು.
ಪಿ.ಎಸ್.ಅನಂತರಾಜು, ತಾಪಂ ಇಒ
ಎಸ್.ಎನ್.ಕುಮಾರ್ ಪುಣಬಗಟ್ಟಿ