Advertisement

ಹರಪನಹಳ್ಳಿ: ಹಂದಿಗಳ ದರ್ಬಾರ್‌; ಸಾರ್ವಜನಿಕರಿಗೆ ಕೋವಿಡ್ ಜೊತೆಗೆ ಸಾಂಕ್ರಾಮಿಕ ರೋಗದ ಭಯ

12:58 PM Jul 27, 2020 | mahesh |

ಹರಪನಹಳ್ಳಿ: ಇಡೀ ವಿಶ್ವಕ್ಕೆ ಮಾರಕವಾಗಿರುವ ಕೊರೊನಾ ಹಾವಳಿ ಒಂದೆಡೆಯಾದರೆ ಮತ್ತೂಂದೆಡೆ ಹರಪನಹಳ್ಳಿ ಪಟ್ಟಣದ ಯಾವುದೇ ಬಡಾವಣೆಗೆ ಹೋದರೂ ಹಂದಿಗಳದ್ದೇ ದರ್ಬಾರ್‌. ಹೀಗಾಗಿ ಕೊರೊನಾ ಸೋಂಕು ಜೊತೆಗೆ ಸಾಂಕ್ರಾಮಿಕ ರೋಗಗಳ ಭಯ ಸಾರ್ವಜನಿಕರನ್ನು ಕಾಡುತ್ತಿದೆ.
ಪಟ್ಟಣದಲ್ಲಿ ಹಂದಿಗಳ ವಿಪರೀತ ಹಾವಳಿಯಾಗಿದ್ದು, ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಅಲೆಯುತ್ತ ವಿಹರಿಸುತ್ತಿರುತ್ತವೆ. ಇವುಗಳ ಹಾವಳಿಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪಟ್ಟಣದ ಬಣಗಾರಗೇರಿ, ಪಟ್ಣದ ಆಚಾರ್ಯ ಬಡಾವಣೆ, ಹಳೇ ಬಸ್‌ನಿಲ್ದಾಣದ ಶಂಕರ ಮಠ, ಬಸ್‌ ನಿಲ್ದಾಣ, ಸಂತೆ ಮಾರುಕಟ್ಟೆ ಸೇರಿದಂತೆ ಪಟ್ಟಣದ ಬಹುತೇಕ ಕಡೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ. ಆದರೆ ಹಂದಿ ಹಾವಳಿ ತಡೆಯಲು ನಿರ್ಲಕ್ಷ್ಯ ತೋರುತ್ತಿರುವ ಪುರಸಭೆ ಅಧಿಕಾರಿಗಳಿಗೆ ಜನರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

Advertisement

ಬಾಣಗೆರೆ, ಆಚಾರ್ಯ ಬಡಾವಣೆಯಲ್ಲಿ ಹಂದಿ ಹಾವಳಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಇಲ್ಲಿ  ಹಿಂಡು ಹಿಂಡಾಗಿ ಹಂದಿಗಳು ಯಾವ ಮುಲಾಜಿಲ್ಲದೆ
ಮನೆಗಳಿಗೆ ನುಗ್ಗುತ್ತವೆ. ಇವುಗಳ ವಿಪರೀತ ಕಾಟದಿಂದ ಕೆಲವರು ಹಗಲು ಹೊತ್ತಲ್ಲೂ ತಮ್ಮ ಮನೆ ಬಾಗಿಲನ್ನು ಹಾಕಿಕೊಳ್ಳುತ್ತಿದ್ದಾರೆ. ಪಟ್ಟಣದ
ತರಕಾರಿ ಮಾರುಕಟ್ಟೆಯಲ್ಲಿ ಹಂದಿಗಳು ಯಾವುದೇ ಭಯವಿಲ್ಲದೇ ನೇರವಾಗಿ ಬಂದು ತರಕಾರಿಗೆ ಬಾಯಿ ಹಾಕಿ ತಿನ್ನುವ ಮೂಲಕ ವ್ಯಾಪಾರಸ್ಥರಿಗೆ ವ್ಯಾಪಾರ
ಮಾಡುವುದಕ್ಕೂ ಅಡ್ಡಿ ಮಾಡುತ್ತಿವೆ ಎನ್ನುತ್ತಾರೆ ವ್ಯಾಪಾರಸ್ಥರು.

ತ್ಯಾಜ್ಯವನ್ನು ಗುಡ್ಡೆ ಹಾಕಿದ ಕಡೆ ಹಾಗೂ ಚರಂಡಿಗಳಲ್ಲಿ ಹಂದಿಗಳು ಅಡ್ಡಾಡಿ, ಕಸವನ್ನು ಚೆಲ್ಲಾಪಿಲ್ಲಿ ಮಾಡುತ್ತಿವೆ. ಇವುಗಳ ಹಾವಳಿ ಭಯ ಮೂಡಿಸುವ
ಹಾಗಿದೆ. ಹಂದಿ ಹಾವಳಿ ನಿಯಂತ್ರಿಸುವಂತೆ, ಚರಂಡಿಗಳನ್ನು ಸ್ವತ್ಛಗೊಳಿಸುವಂತೆ ಹಾಗೂ ರಸ್ತೆ ಮೇಲೆ ನೀರು ಹರಿಯುವ ಸಮಸ್ಯೆಗೆ ಮುಕ್ತಿ ನೀಡುವಂತೆ
ಸಂಬಂಧಪಟ್ಟವರಿಗೆ ಮನವಿ ಮಾಡಿಕೊಂಡಿದ್ದರೂ ಕ್ರಮಕೈಗೊಳ್ಳುತ್ತಿಲ್ಲ ಎನ್ನುವುದು ಬಾಣಗೆರೆ ನಿವಾಸಿಗಳ ಅಳಲು. ಆಚಾರ್ಯ ಬಡಾವಣೆಯಲ್ಲಿ ಹಂದಿಗಳ
ಹಾವಳಿ ಹೆಚ್ಚಾಗಿದ್ದು, ಮನೆ ಮನೆಗೆ ನುಗ್ಗುವ ಮೂಲಕ ಮನೆಯ ಆವರಣವನ್ನು ಸಂಪೂರ್ಣ ಗಲೀಜು ಮಾಡುತ್ತವೆ. ಜೊತೆಗೆ ಆವರಣದಲ್ಲಿ ಬೆಳೆಸಿದ
ಸಸಿಗಳನ್ನು ತರಕಾರಿಗಳನ್ನು ಹಾಳು ಮಾಡುತ್ತವೆ. ಹಂದಿಗಳ ಕಾಟದಿಂದ ನಾವು ಬೇಸತ್ತಿದ್ದೇವೆ ಎನ್ನುತ್ತಾರೆ ಶೋಭಾ ಪ್ರಭು.

ಚಿಕ್ಕಮಕ್ಕಳು, ವಯೋವೃದ್ಧರು ಮತ್ತು ಮಹಿಳೆಯರ ಮೇಲೆ ಹಂದಿಗಳು ದಾಳಿ ನಡೆಸುತ್ತಿರುವ ಕಾರಣ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹಂದಿಗಳಿಂದ ರಸ್ತೆಗಳು, ಸಾರ್ವಜನಿಕ ಪ್ರದೇಶಗಳು ಮಲೀನಗೊಳ್ಳುತ್ತಿವೆ. ಹಂದಿಗಳನ್ನು ಹಿಡಿದು ಸಾಗಿಸುವಂತೆ ಸಾಕಷ್ಟು ಬಾರಿ ತಿಳಿಸಿದರೂ ಪ್ರಯೋಜನವಾಗಿಲ್ಲ. ಪುರಸಭೆ ಅಧಿಕಾರಿಗಳು ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ. ಕೂಡಲೇ ಹಂದಿಗಳ ಮಾಲೀಕರಿಗೆ ಸೂಚನೆ ನೀಡಿ
ಪಟ್ಟಣದಿಂದ ಹಂದಿಗಳನ್ನು ಹೊರ ಹಾಕಬೇಕು.
 ಎಸ್‌. ಜಾಕೀರಹುಸೇನ್‌, ಪುರಸಭೆ ಸದಸ್ಯ

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ 20 ದಿನಗಳ ಹಿಂದೆ ಎರಡು ಲೋಡ್‌  ಹಂದಿಗಳ ಹಿಡಿಸಿ ಪಟ್ಟಣದಿಂದ ಹೊರ ಹಾಕಿದ್ದೇವೆ. ವಾರಕ್ಕೊಮ್ಮೆ ಮಾಲೀಕರು ಸಹ ಹಂದಿಗಳನ್ನು ಹಿಡಿದು ಸಾಗಿಸುತ್ತಿದ್ದಾರೆ. ಸದ್ಯ ಹಂದಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ. ಇದೀಗ ಪುನಃ ಹಂದಿಗಳ ಹಿಡಿಯುವ ಕಾರ್ಯಚರಣೆ ಪ್ರಾರಂಭಿಸಿ ಒಂದು ವಾರದೊಳಗೆ ಹಂದಿಗಳನ್ನು ಹೊರಗೆ ಸಾಗಿಸುವ ಕೆಲಸ ಮಾಡುತ್ತೇವೆ.
 ಬಿ.ಆರ್‌. ನಾಗರಾಜ ನಾಯ್ಕ, ಪುರಸಭೆ ಮುಖ್ಯಾಧಿಕಾರಿ

Advertisement

-ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next