ಹರಪನಹಳ್ಳಿ: ದಾಂಪತ್ಯ ಜೀವನಕ್ಕೆ ಕಾಲಿರಿಸುವ ನೂತನ ದಂಪತಿ ಬಸವಾದಿ ಶರಣರ ಆದರ್ಶಗಳನ್ನು ಬದುಕಿನಲ್ಲಿ ಪಾಲಿಸುತ್ತಾ ಸರಳತೆಯಿಂದ ಜೀವನ ನಡೆಸಿದಾಗ ಮಾತ್ರ ಸಮಾಜದಲ್ಲಿ ಪ್ರಭುದ್ಧರಾಗಿ ಬೆಳೆಯುವುದಕ್ಕೆ ಸಾಧ್ಯ ಎಂದು ಗದಗ-ಡಂಬಳ-ಯಡಿಯೂರು ತೋಂಟದಾರ್ಯ ಸಂಸ್ಥಾನ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಮಂಗಳವಾರ ಕೋಲಶಾಂತೇಶ್ವರ ವಿರಕ್ತ ಮಠದಲ್ಲಿ ಬಸವ ಜಯಂತಿ ಅಂಗವಾಗಿ 35ನೇ ವರ್ಷದ ಕಲ್ಯಾಣ ಮಹೋತ್ಸವ, ಗುರುವಂದನಾ ಸಮಾರಂಭ, ಬಸವ ಗುರು ಕಿರಣ ಹಾಗೂ ಕೋಲಶಾಂತೇಶ್ವರ ಸೇವಾ ಪ್ರಶಸ್ತಿ, ನೂತನ ಕೋಲಶಾಂತೇಶ್ವರ ಕೈಗಾರಿಕಾ ಕಾರ್ಯಾಗಾರ ತರಬೇತಿ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಅಶೀರ್ವಚನ ನೀಡಿದರು.
ಉಪದೇಶ ಮಾಡುವಂತಹ ಸ್ವಾಮೀಜಿ ಸಾವಿರಾರು ಕಡೆ ಸಿಗುತ್ತಾರೆ. ಆದರೆ ಉಪದೇಶಗಳನ್ನು ಪಾಲನೆ ಮಾಡುವವರ ಸಂಖ್ಯೆ ಕಡಿಮೆಯಿದೆ. ಆದರೆ ನುಡಿದಂತೆ ನಡೆಯುತ್ತಿರುವ ಅರಸೀಕೇರಿ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ ಆದರ್ಶವಾಗಿ ಕಾಣುತ್ತಾರೆ. ಕಳೆದ 3 ದಶಕಗಳಿಂದ ನಿರಂತವಾಗಿ ಉಚಿತ ಸಾಮೂಹಿಕ ವಿವಾಹ, ಸಮಾಜಮುಖೀ ಕೆಲಸ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಸಾಮೂಹಿಕ ವಿವಾಹಗಳಿಂದ ಕೋಟ್ಯಂತರ ರೂ. ಉಳಿತಾಯವಾಗುತ್ತದೆ. ಆಡಂಬರ ವಿವಾಹವಾಗುವುದರಿಂದ ಏನು ಪ್ರಯೋಜನವಿಲ್ಲ. ನವ ವಧು ವರರು ಹೆಣ್ಣು ಅಥವಾ ಗಂಡಾಗಲಿ ಒಂದೇ ಮಗುವನ್ನು ಪಡೆಯುವ ಮೂಲಕ ದೇಶದ ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾಗಬೇಕು. ತಂದೆ-ತಾಯಿಗಳನ್ನು ಪೋಷಣೆ ಮಾಡದೇ ವೃದ್ಧಾಶ್ರಮಕ್ಕೆ ಕಳಿಸದೇ ಅವರ ಸೇವೆ ಮಾಡುವ ಮೂಲಕ ಋಣ ತೀರಿಸಬೇಕು. ಬಸವಣ್ಣನವರ ಅಶಯದಂತೆ ಕಾಯಕ ಮಾಡುವ ಮೂಲಕ ಸುಖ ಸಂಸ್ಕಾರ ನಡೆಸಿ ಎಂದು ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಕಳೆದ ವರ್ಷ ಸಾಮೂಹಿಕ ವಿವಾಹದಲ್ಲಿ ದಾಂಪತ್ಯಕ್ಕೆ ಕಾಲಿಸಿದ ದಂಪತಿ ಮಗುವಿನ ತೊಟ್ಟಿಲು ತೂಗುವ ಕಾರ್ಯ ಮಾಡಲಾಯಿತು. ಬೆಂಗಳೂರು ಬಸವ ಟಿವಿ ಮಾಲೀಕ ಕೃಷ್ಣಪ್ಪ ಅವರಿಗೆ ಬಸವ ಗುರುಕಿರಣ, ಗದಗ ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಶಿವಾನಂದ ಎಸ್.ಪಟ್ಟಣಶೆಟ್ಟಿ ಅವರಿಗೆ ಕೋಲಶಾಂತೇಶ್ವರ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ತೋಂಟದ ಬಸವ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. 48 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ನರಸೀಪುರದ ಚೌಡದಾನಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ, ಹೂವಿನ ಹಡಗಲಿಯ ಗವಿಸಿದ್ದೇಶ್ವರ ಮಠದ ಡಾ.ಹಿರಿಯ ಶಾಂತವೀರ ಸ್ವಾಮೀಜಿ, ಸಂಡೂರಿನ ಪ್ರಭು ಸ್ವಾಮೀಜಿ, ಜಗಳೂರು ಶಾಸಕ ಎಸ್.ವಿ.ರಾಮಚಂದ್ರಪ್ಪ, ಬಸವ ಟಿ.ವಿ. ಮಾಲೀಕ ಕೃಷ್ಣಪ್ಪ, ಶಿವಾನಂದ ಎಸ್.ಪಟ್ಟಣಶೆಟ್ಟಿ ಮಾತನಾಡಿದರು. ಬಿಜೆಪಿ ಮುಖಂಡ ವೈ.ದೇವೇಂದ್ರಪ್ಪ, ಎಂ.ರಾಜಶೇಖರ್, ಜಿ.ಪಂ ಸದಸ್ಯೆ ವೈ.ಡಿ.ಸುಶೀಲಮ್ಮ, ತಾಪಂ ಸದಸ್ಯೆ ಪಾಟೕಲ ವಿಶಾಲಕ್ಷಮ್ಮ, ಗ್ರಾ.ಪಂ ಅಧ್ಯಕ್ಷೆ ವಿಜಯಲಕ್ಷ್ಮಿ, ಮುಖಂಡರಾದ ಮರಿಯಪ್ಪ, ಗುಡಿಹಳ್ಳಿ ಹಾಲೇಶ್, ಡಾ.ಸುರೇಶ್, ಚಟ್ನಿಹಳ್ಳಿ ರಾಜಪ್ಪ, ಬಾಲೇನಹಳ್ಳಿ ಕೆಂಚನಗೌಡ ಮತ್ತಿತರರು ಇದ್ದರು.