ಹರಪನಹಳ್ಳಿ: ರಾಜ್ಯದ ದೇವಾಲಯಗಳ ಅರ್ಚಕರ ಹಾಗೂ ಸಿಬ್ಬಂದಿಗೆ 5ನೇ ಆಯೋಗದ ಶಿಫಾರಸಿನಂತೆ ಈಗಾಗಲೇ ವೇತನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ 6ನೇ ವೇತನ ಆಯೋಗದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದ ಗೋಕಣೇಶ್ವರ ಮತ್ತು ಕೋಟೆ ಆಂಜನೇಯ ದೇವಾಲಯಗಳಿಗೆ ಮಂಗಳವಾರ ಭೇಟಿ ನೀಡಿದ ನಂತರ ಮಾತನಾಡಿದ ಅವರು, ತಾಲೂಕಿನ ಐತಿಹಾಸಿಕ ಉಚ್ಚಂಗಿದುರ್ಗ ಗ್ರಾಮದ ಉಚ್ಚಂಗೆಮ್ಮ ದೇವಾಲಯ, ಕೂಲಹಳ್ಳಿ ಗ್ರಾಮದ ಗೋಣಿಬಸವೇಶ್ವರ ದೇವಾಲಯ, ಪಟ್ಟಣದ ಗೋಕರ್ಣೇಶ್ವರ ದೇವಾಲಯ ಸೇರಿ ಒಟ್ಟು 3 ದೇವಾಲಯಗಳ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ತಹಶೀಲ್ದಾರ್ ಗ್ರೇಡ್‌ನ ಪ್ರತ್ಯೇಕ ಕಾರ್ಯನಿರ್ವಾಹಕ ಅಧಿಕಾರಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಪಟ್ಟಣದ ಪುರಾತನ ಕಾಲದ ಗೋಕಣೇಶ್ವರ ದೇವಾಲಯ ಅಭಿವೃದ್ಧಿ ಮತ್ತು ಮೇಲ್ಛಾವಣಿ ದುರಸ್ತಿಗಾಗಿ ಸುಮಾರು 20 ಲಕ್ಷ ರೂ. ಅನುದಾನ ನೀಡಲಾಗುವುದು. ಈ ಕುರಿತು ಕ್ರಿಯಾ ಯೋಜನೆ ತಯಾರಿಸುವಂತೆ ಹಾಗೂ ಗೋಕರ್ಣೇಶ್ವರ ದೇವಾಲಯಕ್ಕೆ ಆರ್ಚಕರ ನೇಮಕ ಮಾಡಿಕೊಂಡು ಆದೇಶ ಪತ್ರ ವಿತರಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತ ಮಹೇಶ್ ಅವರಿಗೆ ಸೂಚಿಸಿದರು. ದೇವಾಲಯ ಹೊರಗೆ ನೀರಿನ ತಟ್ಟಿ ನಿರ್ಮಾಣ ಮಾಡುವಂತೆ ಪುರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪಾಳೇಗಾರ ಸಾಮ್ರಾಜ್ಯದ ಪ್ರಮುಖ ದೇವಾಲಯ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಸಂಬಂಧಿಸಿದಂತೆ ದೇವಾಲಯ ಸುತ್ತಲೂ ಕಾಂಪೌಂಡ್ ಮತ್ತು ಮೇಲ್ಛಾವಣಿ ನಿರ್ಮಾಣಕ್ಕೆ ಈಗಿರುವ ಕಾಣಿಕೆ ಹುಂಡಿ ಹಣ ಮತ್ತು ದೇವಸ್ಥಾನ ಉಳಿತಾಯ ನಿಧಿ 20ಲಕ್ಷ ರೂ.ಸೇರಿ ಒಟ್ಟು ದೇವಾಲಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಅಂದಾಜು ಪಟ್ಟಿ ಸಲ್ಲಿಸುವಂತೆ ದೇವಾಲಯ ಸಮಿತಿ ಪದಾಧಿಕಾರಿಗಳಿಗೆ ಸಚಿವರು ಸಲಹೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ಚಂದ್ರಶೇಖರಭಟ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ, ಜಿಪಂ ಸದಸ್ಯ ಎಚ್.ಬಿ.ಪರುಶುರಾಮಪ್ಪ, ಮುಖಂಡರಾದ ಶಶಿಧರ ಪೂಜಾರ, ಎಂ.ರಾಜಶೇಖರ್, ಎಚ್.ಕೆ.ಹಾಲೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಎಂ.ಟಿ.ಬಸವನಗೌಡ, ಚಿರಸ್ತಹಳ್ಳಿ ಮರಿಯಪ್ಪ, ಎನ್.ಮಜೀದ್, ಬಾಣದ ಅಂಜಿನಪ್ಪ, ಆರ್.ಜಾಕೀರ, ಪಟ್ನಾಮದ ನಾಗರಾಜ, ಪುರಸಭೆ ಸದಸ್ಯರಾದ ಎಸ್.ಜಾಕೀರಹುಸೇನ್, ಗೊಂಗಡಿ ನಾಗರಾಜ್, ಭರತೇಶ್, ಗಣೇಶ್, ತಹಶೀಲ್ದಾರ್ ಡಾ.ನಾಗವೇಣಿ, ಮುಖ್ಯಾಧಿಕಾರಿ ನಾಗರಾಜ ನಾಯ್ಕ ಹಾಗೂ ಮುಜರಾಯಿ ಇಲಾಖೆ ಸಿಬ್ಬಂದಿ ಇದ್ದರು.